ದಾವಣಗೆರೆ: ಕಾಂಗ್ರೆಸ್ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಇಲ್ಲಿನ ಬಸವರಾಜಪೇಟೆ ನಿವಾಸಿ ಸೀಮೆಎಣ್ಣೆ ಪರಮೇಶ್(43) ತಮ್ಮ ಮನೆ ಪಕ್ಕದ ಬೀದಿ ಹುಬ್ಬಳ್ಳಿ ಚೌಡಪ್ಪ ಗಲ್ಲಿಯಲ್ಲಿರುವ ಪರಿಚಿತರ ಮನೆಗೆ ಹೋಗಿ ಬರುತ್ತಿದ್ದಾಗ ಆಟೋದಲ್ಲಿ ಬಂದ ಮೂವರು ಪರಮೇಶ್‍ಗೆ ಹೊಡೆದು ಕೆಳಗೆ ಬೀಳಿಸಿದ್ದಾರೆ. ನಂತರ ಪರಮೇಶ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿದ್ದ ಪರಮೇಶ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು.
ಈ ಹಿಂದೆ ದೇವಸ್ಥಾನದ ಪಟ್ಟಿ ಕೇಳುವ ವಿಚಾರವಾಗಿ ಗಲಾಟೆ ನಡೆದಿತ್ತು. ಆಗ ಪರಮೇಶ್ ಗಲಾಟೆ ಬಗ್ಗೆ ಪಂಚಾಯತಿ ಮಾಡಿ ಬಗೆಹರಿಸಿದ್ದ. ಆದರೆ, ರಾಜೀ ಪಂಚಾಯತಿ ವೇಳೆ ತಮ್ಮ ವಿರುದ್ದ ಪಂಚಾಯತಿ ಮಾಡಲಾಗಿದೆ ಎಂದು ಕೊಲೆ ಆರೋಪಿಗಳು ಈತನ ಮೇಲೆ ದ್ವೇಷ ಸಾಧಿಸಿದ್ದರು. ಇದೇ ಸೇಡಿನ ಹಿನ್ನಲೆಯಲ್ಲಿ ನಾಲ್ವರು ಪರಮೇಶ್‌ನನ್ನು ಬುಧವಾರ ರಾತ್ರಿ ಬಸವರಾಜ ಪೇಟೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದರು.
ಪರಮೇಶ್ ಈ ಮೊದಲು ಸೀಮೆಎಣ್ಣೆ ವ್ಯಾಪಾರ ನಡೆಸುತ್ತಿದ್ದು, ಆನಂತರ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಮೊದಲು ಬಿಜೆಪಿಯಲ್ಲಿದ್ದವರು ನಂತರ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇವರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ ಸಿ.ಬಿ.ರಿಷ್ಯಂತ್, ಎಎಸ್ಪಿ ಎಂ.ರಾಜೀವ್ ಭೇಟಿ ನೀಡಿ ಪರಿಶೀಲಿಸಿದರು.
ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಬಸವರಾಜಪೇಟೆ ನಿವಾಸಿ ಸೀಮೆಎಣ್ಣೆ ಪರಮೇಶ್ ಹತ್ಯೆ ಮಾಡಿದ್ದ ಆರೋಪಿಗಳನ್ನು ಗುರುವಾರ ಪೊಲೀಸರು ಬಂಧಿಸಿದ್ದು, ಹನುಮಂತ (33), ಬಸವರಾಜ್ (31)ಕುಮಾರ್ (27) , ನಯಾಜ್ (23)ಬಂಧಿತ ಆರೋಪಿಗಳಾಗಿದ್ದು, ಬಂಧಿತರು ದಾವಣಗೆರೆ ನಿವಾಸಿಗಳಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.