ಈ ಚುನಾವಣೆ ಬಂಗಾರಪ್ಪನವರ ಸೋಲಿಗೆ ಸೇಡು ತೀರಿಸಿಕೊಳ್ಳುವ ಸಮಯ – ಆಯನೂರು ಮಂಜುನಾಥ್ | Election
ರಿಪ್ಪನ್ಪೇಟೆ : ಆರಾಧನ ಯೋಜನೆಯ ಮೂಲಕ ಸಾವಿರಾರು ದೇವಸ್ಥಾನಗಳ ಅಭಿವೃದ್ಧಿಗೊಳಿಸಿದ ಬಂಗಾರಪ್ಪ ನವರ ಪುತ್ರಿ ಮತಕ್ಕಾಗಿ ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ. ಈ ಚುನಾವಣೆ ಬಂಗಾರಪ್ಪನವರ ಸೋಲಿಗೆ ಸೇಡು ತೀರಿಸಿಕೊಳ್ಳುವ ಸಮಯ ಎಂದು ಕಾಂಗ್ರೆಸ್ ಮುಖಂಡ ಆಯನೂರು ಮಂಜುನಾಥ್ ಹೇಳಿದರು.
ಪಟ್ಟಣದ ಸಮೀಪದ ಬೆಳ್ಳೂರು ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಶ್ರೇಯೋಭಿವೃದ್ದಿಗಾಗಿ ಅವಿರತ ಶ್ರಮಿಸಿದ ಬಂಗಾರಪ್ಪ ನವರ ಕೊನೆ ಸಮಯದಲ್ಲಿ ಅವರನ್ನು ಯಡಿಯೂರಪ್ಪನವರು ದ್ವೇಷದಿಂದ ಸೋಲಿಸುವ ಮೂಲಕ ಅವರಿಗೆ ವಿಪರೀತ ನೋವನ್ನುಂಟು ಮಾಡಿದ್ದರು ಈ ಹಿನ್ನಲೆಯಲ್ಲಿ ಅವರ ಸೋಲಿಗೆ ಸೇಡು ತೀರಿಸಿಕೊಳ್ಳುವ ಸಮಯ ಬಂದಿದೆ ಎಂದರು.
ರಾಜ್ಯಾದ್ಯಂತ ಆರಾಧನ ಯೋಜನೆಯ ಮೂಲಕ ಸಾವಿರಾರು ದೇವಸ್ಥಾನಗಳ ಅಭಿವೃದ್ಧಿಗೊಳಿಸಿದ ಬಂಗಾರಪ್ಪ ನವರ ಪುತ್ರಿ ಮತಕ್ಕಾಗಿ ತವರು ಮನೆಯ ಬಾಗಿಲಿಗೆ ಬಂದಿದ್ದು ಅವರಿಗೆ ಮತ ನೀಡಿ ಆಶೀರ್ವದಿಸುವ ಮೂಲಕ ದಿವಂಗತ ಎಸ್ ಬಂಗಾರಪ್ಪನವರಿಗೆ ಶ್ರದ್ದಾಂಜಲಿ ಅರ್ಪಿಸಬೇಕು ಎಂದರು.
ಈ ಸಂಧರ್ಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ , ಶಾಸಕ ಬೇಳೂರು ಗೋಪಾಲಕೃಷ್ಣ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಇನ್ನಿತರರಿದ್ದರು.