ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಕತ್ತಿಗೆ ಕೈ ಹಾಕಿ ಸರಗಳ್ಳತನ ನಡೆಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಮಹಿಳೆಯೊಬ್ಬರು ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಗುಂಡಪ್ಪ ಶೆಡ್ ನಲ್ಲಿರುವ ಕೆಎಸ್ ಈಶ್ವರಪ್ಪನವರ ಮನೆಯ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿದ ಬೈಕ್ ಸವಾರರು ಮಹಿಳೆಯೊಬ್ಬರ ಕತ್ತಿಗೆ ಕೈ ಹಾಕಿ ಸರ ಕದ್ದು ಪರಾರಿಯಾಗಿದ್ದಾರೆ.
ಮಲ್ಲೇಶ್ವರ ನಗರದಲ್ಲಿ ಇವತ್ತು ಬೆಳಗಿನ ಜಾವ ನಡೆದ ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದೇ ಬೈಕ್‌ನಲ್ಲಿ ಬಂದ ಇಬ್ಬರು, ಅದೇ ದಾರಿಯಲ್ಲಿ ಬರುತ್ತಿದ್ದ ಮಹಿಳೆಯರನ್ನ ಅಡ್ಡಗಟ್ಟಿದ್ದಾರೆ. ಮಹಿಳೆಯರು ಆತಂಕಗೊಂಡು ಹಿಂದೆ ಸರಿದಿದ್ದಾರೆ. ಆಗ ಬೈಕ್ ಸವಾರರು ವಿಳಾಸ ಕೇಳಿದ್ದಾರೆ. ಆ ಬಳಿಕ ಬೈಕ್ ಸವಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಹಿಳೆಯರು ಮುಂದಕ್ಕೆ ಹೋಗಿದ್ದಾರೆ. ಅಲ್ಲಿವರೆಗೂ ನಾಟಕ ಮಾಡುತ್ತಿದ್ದ ಬೈಕ್ ಸವಾರರ ಪೈಕಿ ಹಿಂಬದಿ ಸವಾರ ಬೈಕ್‌ನಿಂದ ಕೆಳಕ್ಕೆ ಇಳಿದು ಮಹಿಳೆಯರನ್ನ ಬೆನ್ನತ್ತಿದ್ದಾನೆ. ಹಿಂಬದಿಯಿಂದ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಕತ್ತಿನಲ್ಲಿದ್ದ ಸರ ಕಿತ್ತುಕೊಂಡು ಮರಳಿ ಬೈಕ್ ಹತ್ತಿದ್ದಾನೆ.
ಬೈಕ್ ಸ್ಟಾರ್ಟ್ ಮಾಡಿಟ್ಟುಕೊಂಡಿದ್ದ ಇನ್ನೊಬ್ಬ ಸವಾರ, ಸರ ಕಳ್ಳ ಬೈಕ್ ಏರುತ್ತಲೇ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಬೆಳಗಿನ ಜಾವ ಮನೆ ಮುಂದೆ ನೀರು ಹಾಕುತ್ತಿದ್ದ ಜನರಿಗೂ ಈ ದೃಶ್ಯ ಕಾಣಿಸಿದ್ದು, ಮಹಿಳೆಯರು ಕೂಗಿಕೊಂಡ ಬಳಿಕ ಕಳ್ಳರನ್ನ ಹಿಡಿಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಘಟನೆಯಲ್ಲಿ ಮಹಿಳೆಯ 30 ಗ್ರಾಂ ತೂಕದ ಮಾಂಗಲ್ಯ ಸರ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.