ಸೊರಬ: ಅಚ್ಚರಿಯ ಬೆಳವಣಿಗೆಯಲ್ಲಿ ಜಿಲ್ಲೆಯ ಸೊರಬ ಪುರಸಭೆ ಸದಸ್ಯರು ಪುರಸಭೆಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮೆಟ್ಟಿಲೇರಿದ್ದಾರೆ.
ಸೊರಬ ಪುರಸಭ ಅಧ್ಯಕ್ಷ ಎಂ.ಡಿ.ಉಮೇಶ್ ಅವರ ನಡುವಳಿಕೆಯಿಂದ ಬೇಸತ್ತು ಇಂದು ಪುರಸಭೆಯ 11 ಜನ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿಯ ಬಾಗಿಲು ತಟ್ಟಿದ್ದಾರೆ.
12 ಜನ ಸದಸ್ಯರಿರುವ ಸೊರಬ ಪುರಸಭೆಯಲ್ಲಿ 6 ಜನ ಸದಸ್ಯರು ಬಿಜೆಪಿ ಪಕ್ಷದ ಸದಸ್ಯರಿದ್ದು 4 ಜನ ಕಾಂಗ್ರೆಸ್, ಒಬ್ಬರು ಜೆಡಿಎಸ್ ಒಬ್ಬರು ಪಕ್ಷೇತರರಿದ್ದಾರೆ. ವಿಪಕ್ಷ ನಾಯಕ ಪ್ರಸನ್ನ ಕುಮಾರ್ ದೊಡ್ಡಮನೆ ನೇತೃತ್ವದಲ್ಲಿ 11 ಜನ ಸದಸ್ಯರು ಪುರಸಭೆ ಅಧ್ಯಕ್ಷ ಉಮೇಶ್ ವಿರುದ್ಧ ಸಹಿ ಮಾಡಿ ಡಿಸಿಗೆ ನೀಡಿದ್ದಾರೆ.
ಉಮೇಶ್ ಅವರಿಗೆ 30 ತಿಂಗಳು ಅಂದರೆ ಎರಡು ವರೆ ವರ್ಷಕ್ಕೂ ಹೆಚ್ಚು ಅವಧಿ ನೀಡಲಾಗಿತ್ತು. ಆದರೆ 11 ತಿಂಗಳು ಅವಧಿ ಮುಗಿಸಿರುವ ಸೊರಬ ಅಧ್ಯಕ್ಷರಿಗೆ ಇನ್ನು 19 ತಿಂಗಳು ಬಾಕಿ ಇರುವಾಗಲೇ ಸದಸ್ಯರೆಲ್ಲಾ ಸೇರಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದಾರೆ.
ಸದಸ್ಯರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನಗರಸಭೆಗೆ ಮನವಿ ನೀಡುವಂತೆ ಸೂಚಿಸಿದ್ದಾರೆ. ಈಗಾಗಲೇ ಸಾಗರದ ಎಸಿಗೂ 10 ಜನರ ಸಹಿ ಇರುವ ಪತ್ರವನ್ನು ನೀಡಿರುವುದಾಗಿ ಪುರಸಭೆ ವಿಪಕ್ಷ ನಾಯಕ ಪ್ರಸನ್ನ ಕುಮಾರ ದೊಡ್ಡಮನೆ ತಿಳಿಸಿದ್ದಾರೆ.
ವರದಿ : ವೆಂಕಟೇಶ್ ಚಂದ್ರಗುತ್ತಿ