ರಿಪ್ಪನ್‌ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಳವಳ್ಳಿ-ತಮ್ಮಡಿಕೊಪ್ಪ ಸಂಪರ್ಕ ರಸ್ತೆಯ ಧರೆ ಕುಸಿದು ಸಂಪರ್ಕ ಕಡಿತಗೊಳ್ಳುವ ಅಪಾಯದ ಅತಂಕದಲ್ಲಿ ಇರುವ ಹಿನ್ನೆಲೆಯಲ್ಲಿ ಮಳವಳ್ಳಿ ಮತ್ತು ತಮ್ಮಡಿಕೊಪ್ಪ ಗ್ರಾಮಸ್ಥರು ಇಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ನೇತ್ರತ್ವದಲ್ಲಿ ಶಾಸಕ ಹರತಾಳು ಹಾಲಪ್ಪ ರವರ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ಬೇಳೂರು ಮಳವಳ್ಳಿ-ತಮ್ಮಡಿಕೊಪ್ಪದ ಗ್ರಾಮದ ಸಂಪರ್ಕ ರಸ್ತೆಯು ಸಂಪೂರ್ಣ ಅಪಾಯದ ಸ್ಥಿತಿಯಲ್ಲಿದ್ದು ಈಗಾಗಲೇ ಈ ಸೇತುವೆ ಬಳಿ ದ್ವಿಚಕ್ರ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡ ಉದಾಹರಣೆಗಳು ಇವೆ ಅದರೂ ಕ್ಷೇತ್ರದ ಶಾಸಕರು ಅತಿವೃಷ್ಠಿ ಪರಿಹಾರ ಯೋಜನೆಯಡಿ ತುರ್ತು ಕಾಮಗಾರಿ ಮಾಡಿಸುವತ್ತ ಗಮನಹರಿಸಿಲ್ಲ,ಇದು ಅವರು ಈ ಭಾಗದ ಜನರನ್ನು ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಸೂಕ್ತ ಉದಾಹರಣೆ ಎಂದರು.
ಭಾರಿ ಮಳೆಯಿಂದಾಗಿ ಸಾಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಹಳ್ಳಕೊಳ್ಳಗಳು ತುಂಬಿ ರಸ್ತೆಯ ಮೇಲೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಮನೆ ಮಠಗಳು ಹಾನಿಗೀಡಾಗಿವೆ ಅಲ್ಲದೆ ಜಮೀನಲ್ಲಿ ಬೆಳೆಗಳು ನಾಶಗೊಂಡಿವೆ ಧರೆಗಳು ಕುಸಿದು ಸಂಪರ್ಕ ಕಡಿತಗೊಂಡಿವೆ.ಅದರೂ ರಾಜ್ಯ ಸರ್ಕಾರ ಪರಿಹಾರ ವಿತರಣೆಯಲ್ಲಿ ವಿಳಂಬ ಧೋರಣೆ ತಾಳಿರುವುದು ಖಂಡನೀಯ, ನಿಟ್ಟೂರು ಬಳಿಯಲ್ಲಿ ಸಂಪರ್ಕ ಕಲ್ಪಿಸುವ ಸೇತುವೆ ಬಳಿಯಲ್ಲಿ ಸುಮಾರು ೪ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಾಮಗಾರಿ ಕೇವಲ ಒಂದೇ ಮಳೆಗೆ ಕೊಚ್ಚಿಹೋಗಿದೆ ಹಾಗೇಯೆ ರಾಜ್ಯ ಹೆದ್ದಾರಿ ರಸ್ತೆಗಳು ಹೊಂಡು ಗುಂಡಿ ಬಿದ್ದು ಓಡಾಡದ ಸ್ಥಿತಿಯಲ್ಲಿದ್ದು ಅದನ್ನು ದುರಸ್ಥಿ ಮಾಡುವಷ್ಟು ಹಣವೂ ಸರ್ಕಾರದಲ್ಲಿ ಇಲ್ಲವೇನೋ ಎಂಬ ಸಂಶಯ ಬರುತ್ತದೆ ಎಂದರು.
ನಂತರ ಅರಸಾಳು ಗ್ರಾಪಂ ಅಧ್ಯಕ್ಷರಾದ ಉಮಾಕರ್ ಮಾತನಾಡಿ ಈ ರಸ್ತೆಯ ದುರಸ್ತಿ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ,ಹಾರಂಬಳ್ಳಿ ಬಳಿ ನೂತನ ರಸ್ತೆ ನಿರ್ಮಿಸುವುದಾಗಿ ಹೇಳಿ ಇರುವ ರಸ್ತೆಯನ್ನು ಕಿತ್ತುಹಾಕಿ ಜನಸಾಮಾನ್ಯರು ಓಡಾಡದ ರೀತಿಯಾಗಿದೆ ಎಂದರು.
ಈ ಪ್ರತಿಭಟನೆಯಲ್ಲಿ ಕೆಂಚನಾಲ ಗ್ರಾಪಂ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್,ಎಪಿಎಂಸಿ ಮಾಜಿ ಅಧ್ಯಕ್ಷರಾದ ಹೆಚ್ ವಿ ಈಶ್ವರಪ್ಪ,ರಿಪ್ಪನ್‌ಪೇಟೆ ಕಾಂಗ್ರೆಸ್ ಘಟದ ಅಧ್ಯಕ್ಷ ಆಸೀಫ಼್ ಭಾಷಾಸಾಬ್,ಅರಸಾಳು ಗ್ರಾಮ ಪಂಚಾಯಿತಿ ಸದಸ್ಯ ಯೋಗೇಂದ್ರ ಕೊಳವಂಕ,ಹೆದ್ದಾರಿ ಪುರ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರವೀಣ್ ಸುಳುಗೋಡು, ಮಳವಳ್ಳಿ ಚಂದ್ರಶೇಖರ,ಕಾಂಗ್ರೆಸ್ ಪಕ್ಷದ ಮುಖಂಡರಾದ ಶಿವು ವಡಾಹೊಸಳ್ಳಿ, ನಾಗಪ್ಪ,ರಘುಪತಿ ಬಸವಾಪುರ,ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಉಲ್ಲಾಸ್,ರಮೇಶ್ ಫ್ಯಾನ್ಸಿ, ಚಿಗುರು ಶ್ರೀಧರ, ತಮ್ಮಡಿಕೊಪ್ಪ,ಮಳವಳ್ಳಿ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇