Ripponpete | ಪಿಎಸ್‌ಐ ನಿಂಗರಾಜ್ ಕೆ ವೈ ರವರಿಗೆ ನಾಗರೀಕರಿಂದ ಬೀಳ್ಕೊಡುಗೆ
ಅತ್ಯಲ್ಪ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ಇದೆ – ಪಿಎಸ್‌ಐ ನಿಂಗರಾಜ್ ಕೆ ವೈ
ರಿಪ್ಪನ್‌ಪೇಟೆ : ಲೋಕಸಭಾ ಚುನಾವಣೆ ಇಲ್ಲಿನ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದು ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಜನಾನುರಾಗಿಯಾಗಿ ಕಾರ್ಯನಿರ್ವಹಿಸಿದ ಪಿಎಸ್‌ಐ ಕೆ.ವೈ.ನಿಂಗರಾಜ್ ಇವರನ್ನು ಪುನಃ ಸರ್ಕಾರ ಕರ್ತವ್ಯದ ಮೂಲ ಸ್ಥಳಕ್ಕೆ ವರ್ಗಾವಣೆ ಮಾಡಿದ್ದು ಇಂದು ಅವರನ್ನು ರಿಪ್ಪನ್‌ಪೇಟೆ ಗ್ರಾಮಾಡಳಿತ ಹಾಗೂ ನಾಗರೀಕರು ಠಾಣೆಯಲ್ಲಿ ಸನ್ಮಾನಿಸಿ ಬೀಳ್ಕೊಟ್ಟರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಟ್ಟಣದ ಗ್ರಾಮ ಪಂಚಾಯತ್ ವತಿಯಿಂದ ನಾಗರೀಕ ಸನ್ಮಾನ ಮಾಡಲಾಯಿತು.ಇದೇ ಸಂಧರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರು ಪಿಎಸ್‌ಐ ರವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ನಿಂಗರಾಜ್ ಕೆ ವೈ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಬರುವ ಮುನ್ನ ಇಲ್ಲಿನ ಜನತೆ ವಿಭಿನ್ನ, ಕರ್ತವ್ಯ ಮಾಡುವುದು ಹೇಗೆ ಎಂಬ ಬಗ್ಗೆ ಸಾಕಷ್ಟು ಗೊಂದಲವಿತ್ತು. ಆದರೆ, ನನಗೆ ಈಗ ಬಿಟ್ಟು ಹೋಗುವುದು ಹೇಗೆ ಎಂಬಂತಾಗಿದೆ ಎಲ್ಲರೂ ನಮಗೆ ಸಹಕಾರ ನೀಡಿದ್ದಾರೆ. ಠಾಣೆಗೆ ವರ್ಗಾವಣೆಯಾಗಿ ಬಂದ ಕೆಲವೇ ದಿನಗಳಲ್ಲಿ ಹುಂಚ ಮುತ್ತಿನಕೆರೆಯ ಕೊಲೆ ಪ್ರಕರಣ ಸವಾಲಾಗಿತ್ತು ಆದರೆ ನಮ್ಮ ಸಿಬ್ಬಂದಿಗಳ ಸಹಕಾರದಿಂದ ಆರೋಪಿಯನ್ನು ಪತ್ತೆ ಮಾಡಲಾಗಿತ್ತು. ಇನ್ನೂ ಈ ಠಾಣೆ ವ್ಯಾಪ್ತಿಯ ಸೂಕ್ಷ್ಮ ಪ್ರದೇಶವಾದ ಕೆಂಚನಾಲ ಮತ್ತು ಕೋಡೂರು ಗ್ರಾಮದಲ್ಲಿ ಸಿಸಿ ಟಿವಿ ಅಳವಡಿಸಿ ಕಣ್ಗಾವಲಿನಲ್ಲಿರಿಸಲಾಗಿತ್ತು ಅಲ್ಲದೆ ಕೆಂಚನಾಲಕ್ಕೆ ಮುಂಜಾನೆ ಸೈಕಲ್ ಮೂಲಕ ಮಫ್ತಿಯಲ್ಲಿ ಹೋಗಿ ಅಲ್ಲಿನ ಜನರ ಬಳಿ ಸಾಕಷ್ಟು ಚರ್ಚಿಸಿ ಕೊನೆಗೆ ಅವರುಗಳೇ ಪೊಲೀಸ್ ಇನ್ಸ್‌ಪೆಕ್ಟರ್ ಎಂದು ಹೇಳಿ ಮಾತನಾಡುತ್ತಿದ್ದು ಈ ರೀತಿಯಲ್ಲಿ ಜನಮೆಚ್ಚುಗೆ ಗಳಿಸಲು ಸಾಧ್ಯವಾಗಿದೆ ಎಂದು ತಮ್ಮ ನಾಲ್ಕು ತಿಂಗಳಲ್ಲಿ ಸಾಕಷ್ಟು ಅನುಭವವನ್ನು ತಮ್ಮೂರಿನಲ್ಲಿ ಕಲಿಯುವ ಅವಕಾಶ ಕಲ್ಪಿಸಿದ್ದೀರಿ’ ಎಂದು ನಿರ್ಗಮಿತ ಪಿಎಸ್‌ಐ ಕೆ.ವೈ.ನಿಂಗರಾಜ್ ಹೇಳಿದರು.
ಈ ಸಂಧರ್ಭದಲ್ಲಿ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಪ್ರಮುಖರಾದ ಆರ್.ಎ.ಚಾಬುಸಾಬ್, ಎಂ.ಬಿ.ಮಂಜುನಾಥ, ಎಂ. ಸುರೇಶ್‌ಸಿಂಗ್, ಆರ್.ರಾಘವೇಂದ್ರ, ಟಿ.ಆರ್.ಕೃಷ್ಣಪ್ಪ,ರವೀಂದ್ರ ಕೆರೆಹಳ್ಳಿ ಗ್ರಾಪಂ ಸದಸ್ಯರಾದ ಸುಂದರೇಶ್, ಆಸೀಫ಼್ ಭಾಷಾ, ನಿರೂಪ್ ಕುಮಾರ್ , ಗಣಪತಿ ಗವಟೂರು ,ಸಾರಾಭಿ , ಪಿಡಿಓ ಮಧುಸೂಧನ್, ಶ್ರೀಧರ, ರಮೇಶ್ ಫ್ಯಾನ್ಸಿ, ಕೆ.ಎನ್.ರಾಜಶೇಖರ್ ಕಮದೂರು ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿವರ್ಗ ಸೇರಿದಂತೆ ಇನ್ನಿತರರು ಇದ್ದರು.