ಸದ್ದಿಲ್ಲದೇ ಮಾಯವಾಗುತ್ತಿದೆ ವನ್ಯಜೀವಿ ಅಭಯಾರಣ್ಯದ ಕೋಟ್ಯಾಂತರ ರೂ ಬೆಲೆಬಾಳುವ ಮರಗಳು
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಪಂ ವ್ಯಾಪ್ತಿಯ ಹಾರೋಹಿತ್ತಲು ಗ್ರಾಮದ ವನ್ಯಜೀವಿ ವಲಯದಲ್ಲಿ ಕೋಟ್ಯಾಂತರ ರೂ ಬೆಲೆಬಾಳು ಮರಗಳು ಸದ್ದಿಲ್ಲದೇ ಮರಗಳ್ಳರ ಪಾಲಾಗುತಿದ್ದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಝಣ ಝಣ ಕಾಂಚಾನಕ್ಕೆ ಮರುಳಾಗಿ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಿರಿಗೆರೆ ಅರಣ್ಯ ವಲಯದ ಹಾರೋಹಿತ್ತಲು ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿರುವ ನೂರಾರು ಎಕರೆ ವನ್ಯಜೀವಿ ಅಭಯಾರಣ್ಯದಲಿ ರಸ್ತೆ ಬದಿಯಲ್ಲಿನ ಮರಗಳು ಹೊರತುಪಡಿಸಿ ಕಾಡಿನ ಮಧ್ಯ ಭಾಗದಲ್ಲಿ ನೂರಾರು ಬೃಹದಾಕಾರದ ಕೋಟ್ಯಾಂತರ ರೂ ಮೌಲ್ಯದ ಮರಗಳ ಮಾರಣ ಹೋಮ ನಡೆದಿದೆ. ಸದ್ದೇ ಇಲ್ಲದಂತೆ ಬೆಲೆಬಾಳುವ ಸಾಗುವಾನಿ,ಬೀಟೆ ಮರಗಳನ್ನು ಕಡಿದುಹಾಕಿದ್ದು ಕೇವಲ ಮರದ ಬುಡ ಮಾತ್ರ ಅಲ್ಲಲ್ಲಿ ಉಳಿದುಕೊಂಡಿದೆ.
ಮರಗಳ್ಳತನ ನಡೆದು ಹಲವು ದಿನಗಳೇ ಆಗಿದ್ದರೂ ವನ್ಯಜೀವಿ ವಿಭಾಗ ಅಥವಾ ಅರಣ್ಯ ಇಲಾಖೆ ಜಾಗೃತಗೊಂಡಂತಿಲ್ಲ. ಕಡಿದಿರುವ ಮರಗಳ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿ, ಪಂಚನಾಮೆ ಮಾಡಿರುವ ಗುರುತುಗಳು ಸಹ ಕಾಣಿಸುತ್ತಿಲ್ಲ.ಈ ಸಂಬಂಧ ಪ್ರಕರಣಗಳನ್ನು ದಾಖಲಿಸಿಯೂ ಇಲ್ಲ. ಇದನ್ನೆಲ್ಲ ಗಮನಿಸಿದರೆ ಸಿರಿಗೆರೆ ವಲಯದ ವನ್ಯಜೀವಿ ಸಿಬ್ಬಂದಿ ಪೈಕಿ ಕೆಲವರ ಸಹಕಾರವಿಲ್ಲದೇ ಇಷ್ಟೊಂದು ಸಂಖ್ಯೆಯ ಮರಗಳು ಒಂದೇ ಕಡೆ ಕಳವು ಆಗಲು ಸಾಧ್ಯವಿಲ್ಲ ಎಂದು ಸಮೀಪದ ಗ್ರಾಮದ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಹಳ್ಳಿಗಾಡು ಪ್ರದೇಶಗಳಲ್ಲಿ ವಾಸಿಸುವ ರೈತರು ಸೊಪ್ಪು, ದರಗಲು ಎಲೆಗಳನ್ನು ತಂದು ಜಾನುವಾರುಗಳಿಗೆ,ಕೊಟ್ಟಿಗೆಗಳಿಗೆ ಹಾಕಿ ಗೊಬ್ಬರವನ್ನು ತಯಾರಿಸುವುದು ರೂಡಿಯಾಗಿದ್ದು ಆದರೆ ಕ್ಷುಲ್ಲಕ ಕಾರಣಗಳನ್ನು ನೆಪವೊಡ್ಡಿ ರೈತರಿಗೆ ಅರಣ್ಯ ಪ್ರವೇಶ ಮಾಡದಂತೆ ಹಾಗೂ ಸೊಪ್ಪುಗಳನ್ನು ತರದಂತೆ ತಾಕಿತು ಮಾಡುವ ಅರಣ್ಯ ಇಲಾಖೆಯ ಅಧಿಕಾರಿಗಳು, ಅಕ್ರಮವಾಗಿ ಬೆಲೆಬಾಳುವ ಮರಗಳನ್ನು ಹಾಡಹಗಲೇ ರಾಜಾರೋಷವಾಗಿ ಕಳ್ಳತನ ಮಾಡಿದರೆ ತುಟಿ ಪಿಟಿಕ್ ಎನ್ನದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈ ಪ್ರದೇಶದಲ್ಲಿ ಯಥೇಚ್ಛವಾಗಿ ಸಾಗುವಾನಿ ಮತ್ತು ಬೀಟೆಯ ಮರಗಳನ್ನು ಕಡಿದಿದ್ದು ಅರಣ್ಯ ರಕ್ಷಣೆ ಮಾಡಬೇಕಿದ್ದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಕಾರಣ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಮರಗಳು ಕಳ್ಳರ ಪಾಲಾಗುತ್ತಿದೆ.
ಪ್ರತಿ ಮರವೂ ಎರಡರಿಂದ ಮೂರು ಲಕ್ಷ ಬೆಲೆ ಬಾಳುವಂತಿದ್ದು ಅರಣ್ಯ ಪಾಲಕರು, ಅರಣ್ಯ ಇಲಾಖೆ ತಪಾಸಣಾ ಕೇಂದ್ರಗಳಿದ್ದರೂ ಲಕ್ಷಾಂತರ ಮೌಲ್ಯದ ಮರಗಳ ಕಳ್ಳಸಾಗಾಣಿಕೆ ನಿರಂತರ ನಡೆಯುತ್ತಿದೆ. ಈ ರೀತಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲು ಅರಣ್ಯಾಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತಿದ್ದಾರೆ.
ಒಟ್ಟಾರೆ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿದ್ದ ಬೆಲೆಬಾಳುವ ಮರಗಳು ಮಾಯವಾಗುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ತಮಗೆ ಅರಿವೆ ಇಲ್ಲದಂತೆ ಇರುವುದು ಪರೋಕ್ಷವಾಗಿ ಮರಗಳ್ಳರಿಗೆ ಬೆಂಬಲ ನೀಡಿದಂತಾಗಿದೆ. ಕೂಡಲೇ ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅರಣ್ಯಗಳ್ಳರಿಗೆ ಬಿಸಿ ಮುಟ್ಟಿಸಬೇಕು ಎನ್ನುವುದು ಸ್ಥಳೀಯರ ಒತ್ತಾಸೆಯಾಗಿದೆ.