ಐಷರಾಮಿ ವಾಹನದಲ್ಲಿ ದನ ಕಳ್ಳತನ: ವಾಹನ ಸಮೇತ ಆರೋಪಿಗಳ ಹೆಡೆಮುರಿ ಕಟ್ಟಿದ ರಿಪ್ಪನ್ಪೇಟೆ ಪೊಲೀಸರು
Ripponpet police have cracked a cattle theft case involving a luxury vehicle, arresting two accused within 15 days. The swift operation was led by PSI Raju Reddy. Read the full crime report on Postman News.
ರಿಪ್ಪನ್ಪೇಟೆ: ಯಾರಿಗೂ ಅನುಮಾನ ಬಾರದಂತೆ ಐಷರಾಮಿ ವಾಹನವನ್ನು ಬಳಸಿಕೊಂಡು ಜಾನುವಾರುಗಳನ್ನು ಕಳವು ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ರಿಪ್ಪನ್ಪೇಟೆ ಪಿಎಸ್ ಐ ರಾಜುರೆಡ್ಡಿ ನೇತ್ರತ್ವದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಜುಲೈ ತಿಂಗಳ ಆರಂಭದಲ್ಲಿ ನಡೆದಿದ್ದ ಈ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕೇವಲ 15 ದಿನಗಳೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.

ಘಟನೆಯ ಹಿನ್ನೆಲೆ :
ಜುಲೈ 3, 2026 ರ ರಾತ್ರಿ ರಿಪ್ಪನ್ಪೇಟೆ ಪಟ್ಟಣದ ಸಾಗರ ರಸ್ತೆಯಲ್ಲಿರುವ ಗಿರಿಗೌಡ ಎಂಬುವವರ ಮನೆಯ ಸಮೀಪ ಈ ಘಟನೆ ಜರುಗಿತ್ತು. ಕತ್ತಲಲ್ಲಿ ಐಷರಾಮಿ ವಾಹನದಲ್ಲಿ ಬಂದ ದುಷ್ಕರ್ಮಿಗಳು, ದನಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಐಷರಾಮಿ ವಾಹನ ಬಳಸಿದ್ದರಿಂದ ಸ್ಥಳೀಯರಿಗೆ ತಕ್ಷಣಕ್ಕೆ ಯಾವುದೇ ಅನುಮಾನ ಬಂದಿರಲಿಲ್ಲ. ಈ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ದೇವರಾಜ್ ಕೆರೆಹಳ್ಳಿ ಅವರು ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದರು.
ಕ್ಷಿಪ್ರ ಕಾರ್ಯಾಚರಣೆ ಮತ್ತು ಬಂಧನ
ದೂರು ದಾಖಲಿಸಿಕೊಂಡ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸ್ ಇಲಾಖೆ, ಡಿವೈಎಸ್ಪಿ ಅರವಿಂದ್ ಕಲಗುಜ್ಜಿ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಗೌಡಪ್ಪ ಗೌಡರ್ ಅವರ ನೇರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿತ್ತು. ಪಿಎಸ್ಐ ರಾಜು ರೆಡ್ಡಿ ಅವರ ನೇತೃತ್ವದ ಈ ತಂಡವು ತನಿಖೆಯನ್ನು ಚುರುಕುಗೊಳಿಸಿ, ಕೃತ್ಯ ನಡೆದ ಕೇವಲ 15 ದಿನಗಳ ಅಂತರದಲ್ಲಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳನ್ನು ಶಿವಮೊಗ್ಗದ ಹಳೆಮಂಡ್ಲಿ ನಿವಾಸಿ ಅಮೀರ್ ಸುಹೇಲ್ (26 ವರ್ಷ) ಮತ್ತು ಮಹಮ್ಮದ್ ಇಸ್ರಾರ್ ಉಲ್ಲಾ ಖಾನ್ (20 ವರ್ಷ) ಎಂದು ಗುರುತಿಸಲಾಗಿದೆ. ಆರೋಪಿಗಳು ಬಳಸಿದ್ದ ಇನ್ನೀವಾ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿಪೊಲೀಸ್ ಸಿಬ್ಬಂದಿಗಳಾದ ರಾಮಚಂದ್ರ ಎನ್.ಎಂ, ಅಶೋಕ್, ವಿಶ್ವನಾಥ್ , ಪರಮೇಶ್ವರಪ್ಪ , ಮತ್ತು ಅವಿನಾಶ್ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಆರೋಪಿಗಳು ಐಷರಾಮಿ ವಾಹನಗಳನ್ನು ಬಳಸಿಕೊಂಡು ಇನ್ನಿತರ ಕಡೆಗಳಲ್ಲೂ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಪೊಲೀಸರ ಈ ತ್ವರಿತ ಕಾರ್ಯಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.