ಕಾಡಂಚಿನ ಒಂಟಿ ಜೀವಕ್ಕೆ ಆಸರೆಯಾದ ಖಾಕಿ ಪಡೆ : ಗೌರಮ್ಮಜ್ಜಿಯ ಕೊನೆಗಾಲದಲ್ಲಿ ಸಿಕ್ಕಿತು ಬೆಚ್ಚಗಿನ ಸೂರು
In a heartwarming act of humanity, Shivamogga Police and Lions Club built a safe home for 70-year-old Gauramma, who had been living alone in a fragile hut on the edge of a forest. Read the inspiring story of compassion, community service, and hope.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ… ಮಳೆಗಾಲ ಬಂದರೆ ಬಿಡದೆ ಸುರಿಯುವ ಜಡಿಮಳೆ, ಇನ್ನೊಂದೆಡೆ ಪ್ರಾಣವನ್ನೇ ನಡುಗಿಸುವ ಕಾಡಾನೆಗಳ ಘೀಳಿಂಕಾರ. ಇಂತಹ ಭಯಾನಕ ಕಾಡಿನಂಚಿನಲ್ಲಿ, ಕೇವಲ ಬಿದಿರಿನ ಕಡ್ಡಿ ಹಾಗೂ ಹರಿದು ಹೋದ ಪ್ಲಾಸ್ಟಿಕ್ ಹಾಳೆಯನ್ನೇ ಆಕಾಶವೆಂದು ನಂಬಿ ಬದುಕುತ್ತಿದ್ದರು 70 ವರ್ಷದ ಗೌರಮ್ಮಜ್ಜಿ. ಆ ಒಂಟಿ ಜೀವ ಅನುಭವಿಸಿದ ಚಳಿ, ಮಳೆ, ಹಾಗೂ ಆನೆಗಳ ಭಯವನ್ನು ಊಹಿಸಲೂ ಅಸಾಧ್ಯ!
”ಈ ಜನ್ಮದಲ್ಲಿ ನನಗೊಂದು ಭದ್ರವಾದ ಸೂರು ಸಿಗಲಾರದು, ಈ ಹರಿದ ಗುಡಿಸಲೇ ನನ್ನ ಪಾಲಿನ ಅರಮನೆ” ಎಂದು ಆ ಅಜ್ಜಿ ಅದೆಷ್ಟು ರಾತ್ರಿ ಭೀತಿಯಿಂದ ಕಣ್ಣೀರಿಟ್ಟಿದ್ದರೋ! ಆದರೆ, ಆ ಕಣ್ಣೀರನ್ನು ಒರೆಸಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಲಯನ್ಸ್ ಕ್ಲಬ್ ದೇವದೂತರಂತೆ ಬಂದವು. ಆಗುಂಬೆಯಂತಹ ಅಪಾಯಕಾರಿ ಪ್ರದೇಶದಲ್ಲಿ, ಯಾವುದೇ ಭದ್ರತೆಯಿಲ್ಲದೆ ನಡುಗುತ್ತಿದ್ದ ಅಜ್ಜಿಯ ದೈನೇಸಿ ಸ್ಥಿತಿ, ಮನೆ-ಮನೆ ಭೇಟಿ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯ ಕಣ್ಣಿಗೆ ಬಿತ್ತು. ಆ ದೃಶ್ಯ ಅವರ ಕರುಳನ್ನು ಹಿಂಡಿತ್ತು.
ಅಜ್ಜಿಯ ಸುತ್ತಲೂ ಸದಾ ಕಾಡಾನೆಗಳ ದಾಳಿಯ ಭೀತಿ. ಇದನ್ನು ಅರಿತ ಎಸ್.ಪಿ. ಬಿ. ನಿಖಿಲ್ ಅವರ ಮನಸ್ಸು ಮಿಡಿಯಿತು. “ತಕ್ಷಣ ಆ ತಾಯಿಗೊಂದು ಸುಭದ್ರ ಸೂರು ಒದಗಿಸಲೇಬೇಕು” ಎಂಬ ಅವರ ಹೃದಯಸ್ಪರ್ಶಿ ಸಂಕಲ್ಪಕ್ಕೆ, ಲಯನ್ಸ್ ಕ್ಲಬ್ ಹಾಗೂ ದಯಾಮಯಿ ದಾನಿಗಳು ಪ್ರೀತಿಯಿಂದ ಕೈಜೋಡಿಸಿದರು.
ಅಜ್ಜಿಗೆ ಸ್ವಂತ ಪುಟ್ಟ ಜಾಗವಿದ್ದರೂ, ಕಾಸಿನ ಕವಡೆ ಇರಲಿಲ್ಲ. ಆದರೆ ಕಾಳಜಿಯುಳ್ಳ ಮನಸ್ಸುಗಳು ಒಂದಾದಾಗ ಪವಾಡವೇ ಸೃಷ್ಟಿಯಾಯಿತು. ಕೇವಲ ಮೂರೇ ತಿಂಗಳಲ್ಲಿ, 1.9 ಲಕ್ಷ ರೂ. ವೆಚ್ಚದಲ್ಲಿ ಮಾನವೀಯತೆಯ ಇಟ್ಟಿಗೆಗಳನ್ನು ಪೇರಿಸಿ ಸುಂದರವಾದ ಮನೆಯೊಂದು ತಲೆ ಎತ್ತಿತು. ವರುಣ ದೇವನೂ ಅಜ್ಜಿಯ ಮೇಲೆ ಕರುಣೆ ತೋರಿದನೋ ಏನೋ, ಮುಂಗಾರು ಕೊಂಚ ವಿಳಂಬವಾಗಿ, ಮಳೆಗಾಲ ಶುರುವಾಗುವ ಮುನ್ನವೇ ಈ ಪುಣ್ಯದ ಕೆಲಸ ಸಾಕಾರಗೊಂಡಿತು.
ಜೂನ್ 21, 2026… ಇದು ಗೌರಮ್ಮಜ್ಜಿಯ ಪಾಲಿಗೆ ಮರುಹುಟ್ಟು ಪಡೆದ ದಿನ. ತಮ್ಮ ಕನಸಿನ ಅರಮನೆ ‘ಲಯನ್ಸ್ ಡ್ರೀಮ್ ಕುಟೀರ’ದ ಕೀಲಿಕೈಯನ್ನು ಎಸ್.ಪಿ. ಬಿ. ನಿಖಿಲ್, ಆಗುಂಬೆ ಪಿ.ಎಸ್.ಐ ಶಿವನಗೌಡ ಪಾಟೀಲ್ ಹಾಗೂ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಅಜ್ಜಿಯ ನಡುಗುವ ಕೈಗಳಿಗೆ ಇತ್ತಾಗ, ಆ ಮುಗ್ಧ ತಾಯಿಯ ಕಣ್ಣಿನಿಂದ ಆನಂದಭಾಷ್ಪ ಮಳೆಯಂತೆ ಹರಿಯಿತು. ಆ ಕೃತಜ್ಞತೆಯ ಕೈಮುಗಿಲಿನಲ್ಲಿ ಸಾವಿರಾರು ಆಶೀರ್ವಾದಗಳಿದ್ದವು.
ಬದುಕಿನ ಇಳಿಹೊತ್ತಿನಲ್ಲಿ, ಯಾರೂ ಇಲ್ಲದ ಅನಾಥ ಜೀವಕ್ಕೆ, ಮಗನಂತೆ ನಿಂತು ಬೆಚ್ಚಗಿನ ಸೂರು ಕಟ್ಟಿಸಿಕೊಟ್ಟ ಪೊಲೀಸ್ ಪಡೆ ಹಾಗೂ ಲಯನ್ಸ್ ಕ್ಲಬ್ ಕೇವಲ ಇಟ್ಟಿಗೆಯ ಮನೆಯನ್ನಲ್ಲ, ಬದಲಾಗಿ ಒಂದು ಮುದುಡಿದ ಜೀವಕ್ಕೆ ಬದುಕುವ ಭರವಸೆಯನ್ನು ನೀಡಿದ್ದಾರೆ. ಅಜ್ಜಿಯ ಮುಖದಲ್ಲಿ ಅಂದು ಮೂಡಿದ ಆ ನೆಮ್ಮದಿಯ ಮಂದಹಾಸ, ಇಡೀ ಸಮಾಜಕ್ಕೇ ಮಾನವೀಯತೆಯ ಪಾಠವಾಗಿದೆ.
ರೈತರ ಹೆಸರಿಗೂ ಗೌರವದ ಅಂಕಿತ ಬೇಕು: ‘Fr’ ಸೇರಿಸಲು ಸರ್ಕಾರಕ್ಕೆ ಮನವಿ Kalluru Meghraj urges the Karnataka government…
ಕುಡಿಯುವ ನೀರಿಗಾಗಿ ಬಾಳೂರು ಗ್ರಾಮಸ್ಥರ ಆಕ್ರೋಶ; ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ Residents of Baluru and Kaleshwara villages…
ಬಟಾಣಿಜಡ್ಡು, ತಮ್ಮಡಿಕೊಪ್ಪ ಭಾಗದಲ್ಲಿ ಆನೆಗಳ ಸಂಚಾರ – ತೋಟಗಳಿಗೆ ಹಾನಿ , ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ Wild elephant…
ಕಾರಿನಲ್ಲಿ ಗಾಂಜಾ ಮಾರಾಟ: ಇಬ್ಬರ ಬಂಧನ, 1.42 ಕೆಜಿ ಗಾಂಜಾ ಹಾಗೂ ಕಾರು ಜಪ್ತಿ Two people were arrested…
ಎಣ್ಣೆ ಮತ್ತಿನಲ್ಲಿ ಅಪಾಯಕಾರಿ ಆಟೋ ಚಾಲನೆ: ಚಾಲಕನ ಬಂಧನ, ವಾಹನ ಪೊಲೀಸ್ ವಶಕ್ಕೆ Shivamogga West Traffic Police registered…
ಅರಸಾಳು ಬಳಿ ರೈಲ್ವೆ ಹಳಿಯ ಮೇಲೆ ಉರುಳಿದ ಮರ; ಮಾರ್ಗ ಮಧ್ಯೆ ನಿಂತ ತಾಳಗುಪ್ಪ-ಬೆಂಗಳೂರು ರೈಲು! ಪ್ರಯಾಣಿಕರ ಪರದಾಟ The…