Categories: Blog

ಹುಲಿಕಲ್ ಘಾಟ್ ದುರಂತ: ಹೊಣೆಗಾರಿಕೆ ಕೇವಲ ಗುತ್ತಿಗೆದಾರನದೋ ಅಥವಾ ಇಡೀ ವ್ಯವಸ್ಥೆಯದ್ದೋ?

ಹುಲಿಕಲ್ ಘಾಟ್ ದುರಂತ: ಹೊಣೆಗಾರಿಕೆ ಕೇವಲ ಗುತ್ತಿಗೆದಾರನದೋ ಅಥವಾ ಇಡೀ ವ್ಯವಸ್ಥೆಯದ್ದೋ?

ಲಕ್ಷಗಟ್ಟಲೆ ಸಂಬಳ ಪಡೆಯುವ ತಾಂತ್ರಿಕ ಅಧಿಕಾರಿಗಳು ಎಡವಿದ್ದೆಲ್ಲಿ? ಏಕಪಕ್ಷೀಯ ಆರೋಪಗಳ ಆಚೆಗೆ ನಿಂತು ನೋಡಬೇಕಾದ ವಾಸ್ತವಗಳು

A deadly landslide at Hulikal Ghat in Shivamogga raises serious questions about accountability. Was it contractor negligence or systemic failure involving engineers and authorities? A deeper look beyond one-sided blame.

​ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳನ್ನು ಬೆಸೆಯುವ ಪ್ರಮುಖ ಸಂಪರ್ಕ ಕೊಂಡಿಯಾದ ಹೊಸನಗರ ತಾಲೂಕಿನ ಹುಲಿಕಲ್ (ಬಾಳೇಬರೆ) ಘಾಟಿಯಲ್ಲಿ ಇತ್ತೀಚೆಗೆ (ಏಪ್ರಿಲ್ 9, 2026) ಸಂಭವಿಸಿದ ಭೀಕರ ಮಣ್ಣು ಕುಸಿತವು ಮೂವರು ಅಮಾಯಕ ಕಾರ್ಮಿಕರನ್ನು ಬಲಿಪಡೆದಿದೆ. ರಾಜ್ಯ ಹೆದ್ದಾರಿ 52ರ ಚಂಡಿಕಾಂಬಾ ದೇವಸ್ಥಾನದ ಸಮೀಪ ಸುಮಾರು 4.8 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದ ರಸ್ತೆ ಅಗಲೀಕರಣ ಮತ್ತು ತಡೆಗೋಡೆ (Retaining wall) ನಿರ್ಮಾಣ ಕಾಮಗಾರಿಯ ವೇಳೆ ಗುಡ್ಡ ಕುಸಿದು ಈ ದುರಂತ ಸಂಭವಿಸಿದೆ. ಈ ಅನಿರೀಕ್ಷಿತ ಘಟನೆಯು ಅಭಿವೃದ್ಧಿ ಕಾಮಗಾರಿಗಳ ಹಿಂದಿರುವ ಸುರಕ್ಷತಾ ಮಾನದಂಡಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದುರಂತದ ವಾಸ್ತವ ಮತ್ತು ರಕ್ಷಣಾ ಕಾರ್ಯಾಚರಣೆ


ಕಾಮಗಾರಿ ನಡೆಯುತ್ತಿದ್ದಾಗ ಏಕಾಏಕಿ ಭಾರಿ ಪ್ರಮಾಣದ ಮಣ್ಣು ಕುಸಿದುಬಿದ್ದ ಪರಿಣಾಮ, ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ರಾಜು ಮತ್ತು ಶಬ್ಬೀರ್ ಎಂಬ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಎಸ್‌ಡಿಆರ್‌ಎಫ್ (SDRF) ತಂಡಗಳ ಕಾರ್ಯಾಚರಣೆ ಬಳಿಕ, ಮುಂದಿನ ಅಪಾಯಗಳನ್ನು ಅರಿತ ಜಿಲ್ಲಾಡಳಿತವು ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಮುಖ್ಯಮಂತ್ರಿಗಳು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಆದರೆ, ಕೇವಲ ಪರಿಹಾರದಿಂದ ವ್ಯವಸ್ಥೆಯ ಮೂಲಭೂತ ಲೋಪಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ.ಏಕಪಕ್ಷೀಯ ಆರೋಪಗಳ ಹಿಂದಿನ ವಿಪರ್ಯಾಸ ಘಟನೆಯ ನಂತರ, ಸಾರ್ವಜನಿಕ ವಲಯದಲ್ಲಿ ಹಾಗೂ ಕೆಲ ನಾಯಕರಿಂದ ಗುತ್ತಿಗೆದಾರರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂಬ ಏಕಮುಖಿ ಆರೋಪಗಳು ಕೇಳಿಬರುತ್ತಿವೆ.

ಗುತ್ತಿಗೆದಾರರು ಶಾಸಕ ಆರಗ ಜ್ಞಾನೇಂದ್ರ ಅವರ ಸಂಬಂಧಿ ಎಂಬ ಕಾರಣಕ್ಕೆ ಪ್ರಕರಣವು ರಾಜಕೀಯ ಬಣ್ಣವನ್ನೂ ಪಡೆದುಕೊಂಡಿದೆ. ಆದರೆ, ಈ ದುರ್ಘಟನೆಯ ಹೊಣೆಗಾರಿಕೆಯನ್ನು ಕೇವಲ ಗುತ್ತಿಗೆದಾರರೊಬ್ಬರ ಮೇಲೆಯೇ ಹೊರಿಸುವುದು ಎಷ್ಟರಮಟ್ಟಿಗೆ ಸರಿ ಎಂಬ ವಸ್ತುನಿಷ್ಠ ಪ್ರಶ್ನೆಯೂ ಈಗ ಮುನ್ನೆಲೆಗೆ ಬಂದಿದೆ. ಗಮನಾರ್ಹ ಅಂಶವೆಂದರೆ, ಮೃತಪಟ್ಟವರಲ್ಲಿ ಗುತ್ತಿಗೆದಾರರ ಕುಟುಂಬಕ್ಕೆ ಸೇರಿದ ಒಂದು ಜೀವವೂ ಸೇರಿದೆ. ಕಾಮಗಾರಿಯ ಸ್ಥಳದಲ್ಲಿ ಗುತ್ತಿಗೆದಾರರ ಮಗನೂ ಕಾರ್ಯನಿರ್ವಹಿಸುತ್ತಿದ್ದನು, ಘಟನೆಯ ದಿನ ಆತ ಬೇರೆ ಕಡೆ ತೆರಳಿದ್ದರಿಂದ ಅಪಾಯದಿಂದ ಪಾರಾಗಿದ್ದಾನೆ. ಇದು ಉದ್ದೇಶಪೂರ್ವಕ ನಿರ್ಲಕ್ಷ್ಯಕ್ಕಿಂತ ಮೀರಿದ ತಾಂತ್ರಿಕ ವೈಫಲ್ಯವನ್ನು ಸೂಚಿಸುತ್ತದೆ.

ತಾಂತ್ರಿಕ ಇಲಾಖೆ ಹಾಗೂ ಇಂಜಿನಿಯರ್‌ಗಳ ಹೊಣೆಗಾರಿಕೆ ಏನು?

ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಪರಿಸರದಲ್ಲಿ ಇಂತಹ ಬೃಹತ್ ಕಾಮಗಾರಿಗಳನ್ನು ನಡೆಸುವಾಗ ಸಂಬಂಧಪಟ್ಟ ಇಲಾಖೆಯ ಇಂಜಿನಿಯರ್‌ಗಳ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ. ಮಣ್ಣಿನ ಗುಣಲಕ್ಷಣ, ಕುಸಿಯುವ ಸಾಧ್ಯತೆ ಮತ್ತು ಕಾಮಗಾರಿಯ ತಾಂತ್ರಿಕ ನಕ್ಷೆಯನ್ನು (Plan) ಸಿದ್ಧಪಡಿಸುವುದು ತಜ್ಞ ಇಂಜಿನಿಯರ್‌ಗಳ ಜವಾಬ್ದಾರಿ. ಗುತ್ತಿಗೆದಾರರು ಕೇವಲ ಇಲಾಖೆ ನೀಡಿದ ನಕ್ಷೆಯ ಆಧಾರದ ಮೇಲೆ, ಅವರ ಮೇಲ್ವಿಚಾರಣೆಯಲ್ಲೇ ಕೆಲಸ ನಿರ್ವಹಿಸುತ್ತಾರೆ.​ಹೀಗಿರುವಾಗ, ಘಾಟ್ ಪ್ರದೇಶದಲ್ಲಿ ರಸ್ತೆ ಅಗಲೀಕರಣದಂತಹ ಕ್ಲಿಷ್ಟಕರ ಕೆಲಸ ನಡೆಯುವಾಗ ವಾಹನ ಸಂಚಾರವನ್ನು ನಿರ್ಬಂಧಿಸಬೇಕೆಂಬ ಕನಿಷ್ಠ ಎಚ್ಚರಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಏಕೆ ವಹಿಸಲಿಲ್ಲ? ಸ್ಥಳದಲ್ಲಿ ಹಾಜರಿದ್ದು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಿದ್ದ ಇಂಜಿನಿಯರ್‌ಗಳಿಗೆ ಮಣ್ಣು ಕುಸಿಯುವ ತೀವ್ರತೆಯ ಅರಿವು ಇರಲಿಲ್ಲವೇ? ಲಕ್ಷಾಂತರ ರೂಪಾಯಿ ವೇತನ ಪಡೆಯುವ ತಾಂತ್ರಿಕ ಪರಿಣತರು ತಮ್ಮ ಕರ್ತವ್ಯದಲ್ಲಿ ಎಡವಿದ್ದಾರೆಯೇ ಎಂಬ ಅನುಮಾನಗಳು ದಟ್ಟವಾಗಿವೆ. ಇಂಜಿನಿಯರ್‌ಗಳ ಹಾಗೂ ಅಧಿಕಾರಿಗಳ ಈ ತಾಂತ್ರಿಕ ವೈಫಲ್ಯವನ್ನು ಮರೆಮಾಚಿ, ಕೇವಲ ಗುತ್ತಿಗೆದಾರರನ್ನು ಗುರಿಯಾಗಿಸುವುದು ನೈಜ ಅಪರಾಧಿಗಳನ್ನು ರಕ್ಷಿಸುವ ತಂತ್ರವಾಗಬಾರದು.

ಅಭಿವೃದ್ಧಿ ಕಾರ್ಯಗಳು ಅನಿವಾರ್ಯ, ಆದರೆ ಅದು ಅಮಾಯಕ ಕಾರ್ಮಿಕರ ಜೀವ ನಷ್ಟಕ್ಕೆ ಕಾರಣ ಆಗಬಾರದು. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ಕೇವಲ ಗುತ್ತಿಗೆದಾರರನ್ನಷ್ಟೇ ಅಲ್ಲದೆ, ನಕ್ಷೆ ರೂಪಿಸಿದ ಇಂಜಿನಿಯರ್‌ಗಳು ಹಾಗೂ ಮೇಲ್ವಿಚಾರಣೆ ನಡೆಸಿದ ಅಧಿಕಾರಿಗಳ ಪಾತ್ರದ ಕುರಿತೂ ಸಮಗ್ರ ತನಿಖೆ ನಡೆದು, ಹೊಣೆಗಾರಿಕೆ ನಿಗದಿಯಾಗಬೇಕು. ಆಗ ಮಾತ್ರ ಮೃತ ಕಾರ್ಮಿಕರಿಗೆ ನೈಜ ನ್ಯಾಯ ಒದಗಿಸಲು ಹಾಗೂ ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಯಲು ಸಾಧ್ಯ.

🖋 ರಫಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ

ರಿಪ್ಪನ್‌ಪೇಟೆಯಲ್ಲಿ ಅರಣ್ಯಾಧಿಕಾರಿಗಳ ದಾಳಿ : 21 ಕೆ.ಜಿ. ಜಿಂಕೆ ಮಾಂಸ ವಶ, ಆರೋಪಿಗಳು ಪರಾರಿ Forest Flying Squad officials…

4 hours ago

ರಿಪ್ಪನ್‌ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ

ರಿಪ್ಪನ್‌ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ Retired teacher and…

16 hours ago

ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್‌ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ

ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್‌ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ ​ಮಾನವೀಯತೆಯೆಂಬುದು ಕೇವಲ…

17 hours ago

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ - ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ಸೌಹಾರ್ಧ…

17 hours ago

ರಿಪ್ಪನ್‌ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ. ಭಾನುಪ್ರಕಾಶ್ ಕರೆ

ರಿಪ್ಪನ್‌ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ.ಭಾನುಪ್ರಕಾಶ್ ಕರೆ Thirthahalli DySP Dr. Bhanuprakash…

19 hours ago

ರಿಪ್ಪನ್‌ಪೇಟೆಯ ಹೆಮ್ಮೆಯ ವಿದ್ಯಾದೇಗುಲಕ್ಕೆ 100 ವರ್ಷ; ಸೆ.10ರಂದು ಹಳೆಯ ವಿದ್ಯಾರ್ಥಿಗಳ ಮಹತ್ವದ ಸಭೆ

ರಿಪ್ಪನ್‌ಪೇಟೆಯ ಹೆಮ್ಮೆಯ ವಿದ್ಯಾದೇಗುಲಕ್ಕೆ 100 ವರ್ಷ; ಸೆ.10ರಂದು ಹಳೆಯ ವಿದ್ಯಾರ್ಥಿಗಳ ಮಹತ್ವದ ಸಭೆ ಶತಮಾನೋತ್ಸವ ಆಚರಣೆಗೆ ಭರ್ಜರಿ ಸಿದ್ಧತೆ :…

22 hours ago