ನಿಮ್ಮ ಬಳಿ ಹಳೆಯ ವಾಹನಗಳಿವೆಯೇ? ಫಿಟ್‌ನೆಸ್ ಸರ್ಟಿಫಿಕೇಟ್ ಪಡೆಯಲು ಕಚೇರಿಗೆ ಅಲೆದಾಡದೆ, ವಾಹನವನ್ನು ತೋರಿಸದೇ ಏಜೆಂಟರಿಗೆ ಹಣ ನೀಡಿ ಪ್ರಮಾಣಪತ್ರ ಮಾಡಿಸಿಕೊಳ್ಳುತ್ತಿದ್ದೀರಾ? ಹಾಗಿದ್ದರೆ ಈ ಹೊಸ ನಿಯಮಗಳು ನಿಮಗೆ ನಿಜಕ್ಕೂ ಆಘಾತ ತರುವಂತವು.
ವಾಹನಗಳ ಫಿಟ್‌ನೆಸ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ತಡೆಯಲು ಹಾಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಮಹತ್ವದ ಮತ್ತು ಕ್ರಾಂತಿಕಾರಿ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಈ ಕ್ರಮಗಳಿಂದ ನಿರ್ವಹಣೆ ಹೆಸರಿನಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಶಾಶ್ವತ ಬೀಗ ಜಡಿಯಲು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಕಠಿಣ ನಿರ್ಧಾರ ಕೈಗೊಂಡಿದೆ.
ATS ಕೇಂದ್ರಗಳಲ್ಲಿ ಕಡ್ಡಾಯ ಪರೀಕ್ಷೆ – ನಕಲಿ ಪ್ರಮಾಣಪತ್ರಗಳಿಗೆ ಫುಲ್ ಸ್ಟಾಪ್….
ಇದುವರೆಗೂ ಅನೇಕ ವಾಹನ ಮಾಲೀಕರು ವಾಹನವನ್ನು ಪರಿಶೀಲನೆಗೊಳಪಡಿಸದೇ, ಕೇವಲ ದಾಖಲೆಗಳ ಆಧಾರದಲ್ಲಿ ಅಥವಾ ಏಜೆಂಟರ ಪ್ರಭಾವದಿಂದ ಫಿಟ್‌ನೆಸ್ ಪ್ರಮಾಣಪತ್ರಗಳನ್ನು ಪಡೆಯುತ್ತಿದ್ದರು. ಇದು ದೊಡ್ಡ ಮಟ್ಟದ ಅಕ್ರಮ ದಂಧೆಯಾಗಿ ರೂಪುಗೊಂಡಿತ್ತು.
ಆದರೆ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಹೊಸ ಕರಡು ಅಧಿಸೂಚನೆಯ ಪ್ರಕಾರ, ಇನ್ನು ಮುಂದೆ ಖಾಸಗಿ ವಾಹನಗಳು ಕೂಡ ವಾಣಿಜ್ಯ ವಾಹನಗಳ ಮಾದರಿಯಲ್ಲೇ Automated Testing Stations (ATS) ಕೇಂದ್ರಗಳಲ್ಲಿ ಕಡ್ಡಾಯವಾಗಿ ಪರೀಕ್ಷೆಗೆ ಒಳಗಾಗಬೇಕಾಗಿದೆ.ಅಂದರೆ, ವಾಹನವನ್ನು ಭೌತಿಕವಾಗಿ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವುದು ಅನಿವಾರ್ಯ. ಕೇಂದ್ರಕ್ಕೆ ಹಾಜರಾಗದ ವಾಹನಗಳಿಗೆ ಫಿಟ್‌ನೆಸ್ ಸರ್ಟಿಫಿಕೇಟ್ ಸಿಗುವುದೇ ಇಲ್ಲ.
15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಹೊಸ ಅಗ್ನಿಪರೀಕ್ಷೆ
ಹೊಸ ನಿಯಮಗಳ ಅನ್ವಯ, 15 ವರ್ಷ ಮೇಲ್ಪಟ್ಟ ವಾಹನಗಳ ನೋಂದಣಿ ನವೀಕರಣಕ್ಕೆ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವುದು ಕಡ್ಡಾಯವಾಗಿದೆ. ದೇಶಾದ್ಯಂತ ಈಗಾಗಲೇ 160ಕ್ಕೂ ಹೆಚ್ಚು ಹೈಟೆಕ್ ATS ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಈ ಕೇಂದ್ರಗಳಲ್ಲಿ ಮನುಷ್ಯರ ಹಸ್ತಕ್ಷೇಪ ಬಹುತೇಕ ಇಲ್ಲ. ಅತ್ಯಾಧುನಿಕ ಗಣಕೀಕೃತ ಯಂತ್ರಗಳೇ ವಾಹನದ ಯಾಂತ್ರಿಕ ಸ್ಥಿತಿ ಹಾಗೂ ಮಾಲಿನ್ಯ ಹೊರಸೂಸುವಿಕೆ ಮಟ್ಟವನ್ನು ನಿಖರವಾಗಿ ಪರಿಶೀಲಿಸುತ್ತವೆ.
15 ವರ್ಷ ಮೇಲ್ಪಟ್ಟ ವಾಹನಗಳಿಗೆ ಪ್ರತಿ 5 ವರ್ಷಗಳಿಗೊಮ್ಮೆ ಈ ಪರೀಕ್ಷೆ ಕಡ್ಡಾಯವಾಗಿದ್ದು, ವಾಹನ ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಪ್ರಮಾಣಪತ್ರ ನಿರಾಕರಿಸಲಾಗುತ್ತದೆ.
ಬಂತು 10 ಸೆಕೆಂಡ್ ಜಿಯೋ ಟ್ಯಾಗ್ ವೀಡಿಯೊ ಸಾಕ್ಷ್ಯದ ಹೊಸ ರೂಲ್ಸ್
ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಮಹತ್ವದ ಬದಲಾವಣೆ ಎಂದರೆ ವೀಡಿಯೊ ಸಾಕ್ಷ್ಯ ನಿಯಮ.
ಫಿಟ್‌ನೆಸ್ ಪ್ರಮಾಣಪತ್ರ ನೀಡುವ ಮೊದಲು, ಸಂಬಂಧಪಟ್ಟ ATS ಕೇಂದ್ರವು ವಾಹನದ ಕನಿಷ್ಠ 10 ಸೆಕೆಂಡುಗಳ ಜಿಯೋ ಟ್ಯಾಗ್ ಮಾಡಲಾದ ವೀಡಿಯೊವನ್ನು ಸರ್ಕಾರಿ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಈ ವೀಡಿಯೊದಲ್ಲಿ:
ವಾಹನದ ಮುಂಭಾಗ, ಹಿಂಭಾಗ, ಎಡ ಹಾಗೂ ಬಲ ಬದಿಗಳು (360 ಡಿಗ್ರಿ ದೃಶ್ಯ)
ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣಬೇಕು.
ಚಾಸಿಸ್ ಸಂಖ್ಯೆ ಮತ್ತು ಎಂಜಿನ್ ಸಂಖ್ಯೆ ಸ್ಪಷ್ಟವಾಗಿರಬೇಕು.
ಸ್ಥಳ ಮತ್ತು ಸಮಯದ ಡಿಜಿಟಲ್ ದಾಖಲೆಯಿರಬೇಕು.
ಈ ನಿಯಮದಿಂದ ವಾಹನ ಹಾಜರುಪಡಿಸದೇ ಸರ್ಟಿಫಿಕೇಟ್ ಪಡೆಯುವ ಹಳೆಯ ಚಾಳಿಗೆ ಸಂಪೂರ್ಣ ಬ್ರೇಕ್ ಬೀಳಲಿದೆ.
ಪರೀಕ್ಷೆಯಲ್ಲಿ ಫೇಲ್ ಆದರೆ ಗುಜರಿ ಸೇರುವುದು ಖಚಿತ
ವಾಹನವು ಕಠಿಣ ಸ್ವಯಂಚಾಲಿತ ಫಿಟ್‌ನೆಸ್ ಪರೀಕ್ಷೆಯಲ್ಲಿ ಅನುತ್ತೀರ್ಣವಾದರೆ, ಸರ್ಕಾರ ಇದಕ್ಕೂ ಸ್ಪಷ್ಟ ಕ್ರಮ ನಿಗದಿಪಡಿಸಿದೆ.ಫೇಲ್ ಆದ ದಿನಾಂಕದಿಂದ ವಾಹನವನ್ನು ದುರಸ್ತಿಪಡಿಸಿ ಮತ್ತೆ ಪರೀಕ್ಷೆಗೆ ಹಾಜರುಪಡಿಸಲು 180 ದಿನಗಳ (6 ತಿಂಗಳು) ಗಡುವು ನೀಡಲಾಗುತ್ತದೆ.
ಈ ಅವಧಿಯೊಳಗೆ ವಾಹನ ಉತ್ತೀರ್ಣವಾಗದಿದ್ದರೆ
ಆ ವಾಹನವನ್ನು End of Life Vehicle (ELV) ಎಂದು ಘೋಷಿಸಲಾಗುತ್ತದೆ.
ರಾಷ್ಟ್ರೀಯ ವಾಹನ್ ಡೇಟಾಬೇಸ್‌ನಲ್ಲಿ “ಸ್ಕ್ರ್ಯಾಪ್‌ಗೆ ಯೋಗ್ಯ” ಎಂದು ನಮೂದಿಸಲಾಗುತ್ತದೆ.ವಾಹನವನ್ನು ರಸ್ತೆಯಲ್ಲಿ ಓಡಾಡಲು ಸಂಪೂರ್ಣ ಅನರ್ಹ ಎಂದು ಪರಿಗಣಿಸಲಾಗುತ್ತದೆ
ಕಡ್ಡಾಯವಾಗಿ ಅಧಿಕೃತ Vehicle Scrapping ಪ್ರಕ್ರಿಯೆಗೆ ಒಳಪಡಿಸಬೇಕು.
ಯಾವುದೇ ವಿನಾಯಿತಿ ಇಲ್ಲ – ಎರಡು ಮಾತ್ರ ಆಯ್ಕೆಗಳು:
ಹಿಂದಿನ ನಿಯಮಗಳಲ್ಲಿ ಶುಲ್ಕ ಪಾವತಿಸಿ ಫಿಟ್‌ನೆಸ್ ಅವಧಿ ವಿಸ್ತರಣೆ ಮಾಡುವ ಅವಕಾಶವಿತ್ತು. ಆದರೆ ಹೊಸ ಕರಡು ನಿಯಮಗಳಲ್ಲಿ ಈ ಆಯ್ಕೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ಇನ್ನು ಮುಂದೆ ವಾಹನ ಮಾಲೀಕರ ಮುಂದೆ ಇರುವ ಆಯ್ಕೆಗಳು ಕೇವಲ ಎರಡು:
ವಾಹನವನ್ನು ಸಂಪೂರ್ಣ ದುರಸ್ತಿಗೊಳಪಡಿಸಿ ಸುಸ್ಥಿತಿಯಲ್ಲಿ ಇಡುವುದು
ELV ಆಗಿ ಘೋಷಿತವಾದ ವಾಹನವನ್ನು ಗುಜರಿಗೆ ಹಾಕುವುದು
ಯಾವುದೇ ಲೋಪದೋಷಗಳಿಗೆ, ಪ್ರಭಾವಗಳಿಗೆ ಅಥವಾ ಏಜೆಂಟರ ಆಟಾಟೋಪಗಳಿಗೆ ಜಾಗವೇ ಇಲ್ಲ.
India introduces strict new vehicle fitness rules to stop fake certificates. Private vehicles above 15 years must undergo compulsory Automated Testing Station (ATS) inspection with 10-second geo-tagged video proof.



