Secondary PU Preparatory Exam 2026 Maths question paper leak case reported in Shivamogga, Karnataka. Complaint filed at Kote Police Station after the question paper went viral on social media. Education Department suspects leak during transportation; CCTV footage of strong room and nodal centers to be examined.
ಗಣಿತ ಪರೀಕ್ಷೆಗೂ ಮುನ್ನವೇ ಪಿಯುಸಿ ಪ್ರಶ್ನೆ ಪತ್ರಿಕೆ ವೈರಲ್ – ಲೀಕ್ ಹಿಂದಿನ ಕೈವಾಡ ಯಾರದ್ದು!!?? | ದೂರು ದಾಖಲು
ಶಿವಮೊಗ್ಗ: ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ಗಣಿತ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.ಉಪನಿತ್ದೇಶಕ ಚಂದ್ರಪ್ಪ ದೂರು ದಾಖಲಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಶಿವಮೊಗ್ಗದ ಕೆಲ ವ್ಯಕ್ತಿಗಳಿಂದ ಸೋರಿಕೆ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಉಪನಿರ್ದೇಶಕ ಚಂದ್ರಪ್ಪ, ಬೆಳಗ್ಗೆ 10:45ರ ವೇಳೆಗೆ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಮಾಹಿತಿ ತಮ್ಮ ಗಮನಕ್ಕೆ ಬಂದಿತು ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜಿಲ್ಲೆಯ ಒಂದು ಸ್ಟ್ರಾಂಗ್ ರೂಮ್ ಹಾಗೂ ಎಂಟು ನೋಡಲ್ ಕೇಂದ್ರಗಳಲ್ಲಿ ಒಂದರಿಂದ ಪತ್ರಿಕೆ ಸೋರಿಕೆ ಆಗಿರಬಹುದೆಂಬ ಅನುಮಾನವಿದೆ. ಈ ಹಿನ್ನೆಲೆಯಲ್ಲಿ ಸ್ಟ್ರಾಂಗ್ ರೂಮ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊರಗೆ ಗಣಿತ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದು ಪತ್ತೆಯಾಗಿದೆ. ಪ್ರಶ್ನೆ ಪತ್ರಿಕೆ ಸಾಗಿಸುವ ಹಂತದಲ್ಲೇ ಲೀಕ್ ಆಗಿರಬಹುದೆಂಬ ಶಂಕೆ ಮೂಡಿದ್ದು, ವಿದ್ಯಾರ್ಥಿಗಳ ವಾಟ್ಸಾಪ್ ಗುಂಪುಗಳಲ್ಲಿ ಪ್ರಶ್ನೆ ಪತ್ರಿಕೆ ಶೇರ್ ಆಗಿರುವ ಸಾಧ್ಯತೆ ಕುರಿತು ತನಿಖೆ ನಡೆಯುತ್ತಿದೆ.
ಆದರೆ ಲೀಕ್ ಆಗಿರುವ ಪ್ರಶ್ನೆ ಪತ್ರಿಕೆ ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಸಿಕ್ಕಿಲ್ಲ ಎಂದು ಉಪನಿರ್ದೇಶಕ ಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಶಿವಮೊಗ್ಗದ ಪ್ರಶ್ನೆ ಪತ್ರಿಕೆ ಹರಿದಾಡುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ದೂರು ದಾಖಲಿಸಲಾಗಿದೆ.
ತುಮಕೂರು ಜಿಲ್ಲೆಯ ಡಿಡಿಪಿಯು ಶಿವಮೊಗ್ಗದ ಡಿಡಿಪಿಯುಗೆ ವಾಟ್ಸಾಪ್ ಮೂಲಕ 80 ಅಂಕಗಳ ಗಣಿತ ಪ್ರಶ್ನೆ ಪತ್ರಿಕೆಯನ್ನು ಕಳುಹಿಸಿ, “ಇದು ನಿಮ್ಮ ಶಿವಮೊಗ್ಗದ ಪ್ರಶ್ನೆ ಪತ್ರಿಕೆ” ಎಂದು ಮಾಹಿತಿ ನೀಡಿದ ಬಳಿಕ ಈ ಪ್ರಕರಣ ಬಹಿರಂಗಗೊಂಡಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ.



