Breaking
12 Jan 2026, Mon

ಶಾಂತಿ–ಸಹನೆಯಿಂದಲೇ ನೆಮ್ಮದಿಯ ಜೀವನ ಸಾಧ್ಯ : ಫಾದರ್ ಬಿನೋಯ್

ಶಾಂತಿ–ಸಹನೆಯಿಂದಲೇ ನೆಮ್ಮದಿಯ ಜೀವನ ಸಾಧ್ಯ : ಫಾದರ್ ಬಿನೋಯ್

ರಿಪ್ಪನ್‌ಪೇಟೆ : ಶಾಂತಿ, ಸಹನೆ ಹಾಗೂ ಸೇವಾಭಾವದಿಂದ ಬದುಕನ್ನು ರೂಪಿಸಿಕೊಂಡರೆ ಪ್ರತಿಯೊಬ್ಬರೂ ನೆಮ್ಮದಿಯ ಜೀವನವನ್ನು ಸಾಧಿಸಬಹುದು ಎಂದು ಪಟ್ಟಣದ ಗುಡ್ ಶೆಪರ್ಡ್ ಚರ್ಚಿನ ಧರ್ಮಗುರು ಫಾದರ್ ಬಿನೋಯ್ ಹೇಳಿದರು.

ನಗರದ ಗುಡ್ ಶೆಪರ್ಡ್ ಚರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಮಾನವ ಜೀವನ ಒತ್ತಡದಿಂದ ತುಂಬಿದೆ. ಇಂತಹ ಪರಿಸ್ಥಿತಿಯಲ್ಲಿ ಮಾನಸಿಕ ಶಾಂತಿ ಪಡೆಯಬೇಕಾದರೆ ಸಹನೆ, ತಾಳ್ಮೆ ಹಾಗೂ ಶಾಂತಿಯ ಮಾರ್ಗವನ್ನು ಅನುಸರಿಸಬೇಕಾಗಿದೆ. ಇದೇ ಸಂದೇಶವನ್ನು ಜಗತ್ತಿಗೆ ಸಾರಲು ಯೇಸು ಕ್ರಿಸ್ತರು ಅವತರಿಸಿದರು ಎಂದು ಹೇಳಿದರು.

ಯೇಸು ಕ್ರಿಸ್ತರ ಹುಟ್ಟುಹಬ್ಬವಾದ ಕ್ರಿಸ್ಮಸ್ ಹಬ್ಬವು ಪ್ರತಿಯೊಬ್ಬರಿಗೂ ಶಾಂತಿ ಹಾಗೂ ನೆಮ್ಮದಿಯನ್ನು ನೀಡಲಿ. ಜಾತಿ, ಮತ ಹಾಗೂ ಪಂಥಗಳ ಭೇದವನ್ನು ಮರೆತು ಪರಸ್ಪರ ಸದ್ಭಾವನೆ ಹಾಗೂ ಸಹೋದರತ್ವದಿಂದ ಬದುಕಿದರೆ ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಸಾಧ್ಯವೆಂದು ಫಾದರ್ ಬಿನೋಯ್ ಅಭಿಪ್ರಾಯಪಟ್ಟರು.

ಕ್ರಿಸ್ಮಸ್ ಹಬ್ಬದ ಅಂಗವಾಗಿ ಗುಡ್ ಶೆಪರ್ಡ್ ಚರ್ಚನ್ನು ದೀಪಾಲಂಕಾರಗಳಿಂದ ಮನಮೋಹಕವಾಗಿ ಸಿಂಗರಿಸಲಾಗಿತ್ತು. ಕ್ರೈಸ್ತ ಭಕ್ತರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಧಾರ್ಮಿಕ ಕಾರ್ಯಕ್ರಮದ ನಂತರ ಆಗಮಿಸಿದ ಎಲ್ಲಾ ಭಕ್ತರಿಗೆ ಕೇಕ್ ವಿತರಿಸಲಾಯಿತು.
ಹಿರಿಯರು, ಮಕ್ಕಳು ಸೇರಿದಂತೆ ಅನೇಕರು ಕ್ರಿಸ್ಮಸ್ ತಾತನ ವೇಷಧಾರಣೆಯೊಂದಿಗೆ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದರು. ಚರ್ಚಿನ ಮುಂಭಾಗದಲ್ಲಿ ಯೇಸು ಕ್ರಿಸ್ತರ ಜನನವನ್ನು ಸಾರುವ ಗೊದಲಿ (ಮ್ಯಾಂಗರ್ ಸೀನ್) ಭಕ್ತರ ಗಮನಸೆಳೆದು ಜನಾಕರ್ಷಣೆಗೆ ಕಾರಣವಾಯಿತು.

ಒಟ್ಟಾರೆ ಶಾಂತಿ, ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರುವ ಕ್ರಿಸ್ಮಸ್ ಹಬ್ಬವನ್ನು ರಿಪ್ಪನ್‌ಪೇಟೆಯಲ್ಲಿ ಭಕ್ತಿಭಾವ ಹಾಗೂ ಉತ್ಸಾಹದಿಂದ ಆಚರಿಸಲಾಯಿತು.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Exit mobile version