Asim, a talented Kho-Kho player and coach from Vinayaka Nagar in Ripponpet, passed away after complications following an appendix surgery at Meggan Hospital, Shivamogga. His demise has shocked the local sports community.
ರಿಪ್ಪನ್‌ಪೇಟೆ: ಪಟ್ಟಣದ ವಿನಾಯಕ ನಗರ ನಿವಾಸಿ ಹಾಗೂ ಖೋಖೋ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಪ್ರತಿಭಾವಂತ ಆಟಗಾರ ಮತ್ತು ಯುವ ಕ್ರೀಡಾಪಟುಗಳ ನೆಚ್ಚಿನ ತರಬೇತುದಾರ ಆಸೀಮ್ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ
ನಾಲ್ಕು ದಿನಗಳ ಹಿಂದೆ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ ಶಸ್ತ್ರಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕಳೆದ ರಾತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಅಪ್ರತಿಮ ಖೋಖೋ ಆಟಗಾರನಾಗಿ ಹೆಸರು ಮಾಡಿದ್ದ ಆಸೀಮ್ ಅವರು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದರು. ತಮ್ಮ ಕ್ರೀಡಾ ಜೀವನದಲ್ಲಿ ಅನೇಕ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದರು.
ಕ್ರೀಡಾಪಟುವಾಗಿ ಮೆರೆದ ನಂತರವೂ ಅವರು ಕ್ರೀಡೆಗೆ ಇರುವ ಆಸಕ್ತಿ ಹಾಗೂ ನಿಷ್ಠೆಯನ್ನು ಮುಂದುವರೆಸಿದರು. ಕಳೆದ ಸುಮಾರು ಹತ್ತು ವರ್ಷಗಳಿಂದ ರಿಪ್ಪನ್‌ಪೇಟೆಯ ಸರ್ಕಾರಿ ಹೈಸ್ಕೂಲ್ ಹಾಗೂ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಖೋಖೋ ತರಬೇತಿ ನೀಡುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಅನೇಕ ಕ್ರೀಡಾಪಟುಗಳು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದರು. ಕ್ರೀಡಾಪಟುಗಳ ನೆಚ್ಚಿನ ತರಬೇತುದಾರರಾಗಿದ್ದ ಅವರು ಕಠಿಣ ಪರಿಶ್ರಮ ಹಾಗೂ ಶಿಸ್ತಿನ ಮೂಲಕ ತಂಡಗಳನ್ನು ಉತ್ತಮವಾಗಿ ತರಬೇತುಗೊಳಿಸುತ್ತಿದ್ದರು.
ಆಸೀಮ್ ಅವರ ಅಕಾಲಿಕ ನಿಧನದಿಂದ ಕುಟುಂಬದವರಿಗೆ ಮಾತ್ರವಲ್ಲದೆ ಕ್ರೀಡಾ ವಲಯಕ್ಕೂ ಅಪಾರ ನಷ್ಟ ಉಂಟಾಗಿದೆ. ಮೃತರು ಪತ್ನಿ ಹಾಗೂ ಐದು ವರ್ಷದ ಪುತ್ರನನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಪಟ್ಟಣದ ಸಾಗರ ರಸ್ತೆಯ ಖಬರ್ ಸ್ಥಾನ್ ನಲ್ಲಿ ನೆರವೇರಿತು
ಅತ್ಯುತ್ತಮ ಖೋಖೋ ಕ್ರೀಡಾಪಟುವಾಗಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ಬಳಿಕ ಯಾವುದೇ ಪ್ರತಿಫಲಾಕಾಂಕ್ಷೆ ಇಲ್ಲದೆ ಹತ್ತು ವರ್ಷಕ್ಕೂ ಹೆಚ್ಚು ಕಾಲ ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ಅವರ ಸೇವೆ ಸದಾ ಸ್ಮರಣೀಯವಾಗಿದೆ.
ಆಸೀಮ್ ಅವರ ಅಕಾಲಿಕ ನಿಧನಕ್ಕೆ ಕ್ರೀಡಾಪಟುಗಳು, ಸ್ನೇಹಿತರು ಹಾಗೂ ಸಾರ್ವಜನಿಕರು ಆಳವಾದ ಸಂತಾಪ ಸೂಚಿಸಿದ್ದಾರೆ. ಪೋಸ್ಟ್ ಮ್ಯಾನ್ ನ್ಯೂಸ್ ಬಳಗವೂ ಮೃತರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬದವರಿಗೆ ಸಂತಾಪ ಸೂಚಿಸಿದೆ.




