Headlines

ಹೋಂ ಗಾರ್ಡ್ ಮೇಲೆ ಹಲ್ಲೆ ಆರೋಪ: ಕಮಾಂಡೆಂಟ್ ವಿರುದ್ಧ ಕ್ರಮಕ್ಕೆ ಜಿಲ್ಲಾ ಆದಿವಾಸಿ ಸಂಘ ಆಗ್ರಹ

ಹೋಂ ಗಾರ್ಡ್ ಮೇಲಿನ ಹಲ್ಲೆ ಆರೋಪ: ಕಮಾಂಡೆಂಟ್ ವಿರುದ್ಧ ಕ್ರಮಕ್ಕೆ ಆಗ್ರಹ

ಮೇಲಾಧಿಕಾರಿ ಮೇಲೆ ಎಫ್ಐಆರ್ ಹಾಕಲು ವೀಡಿಯೋ ಸಾಕ್ಷ್ಯ ಬೇಕಂತೆ!? ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ !

Allegation of physical assault on a Home Guard from the ST community by Shivamogga District Home Guards Commandant. Tribal Welfare Association demands legal action and justice.

ಶಿವಮೊಗ್ಗ: ಕರ್ತವ್ಯ ನಿರ್ವಹಿಸುತ್ತಿದ್ದ ಆದಿವಾಸಿ ಹಸಲರು (ಎಸ್‌ಟಿ) ಸಮುದಾಯಕ್ಕೆ ಸೇರಿದ ಹೋಂ ಗಾರ್ಡ್ ಮೇಲೆ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಆರೋಪಿತ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಆದಿವಾಸಿ ಹಸಲರು ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

ಈ ಕುರಿತು ಹೊಸನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಸಿ. ಮಲ್ಲೇಶಪ್ಪ ಮಾತನಾಡಿ ಹೊಸನಗರ ತಾಲೂಕಿನ ಮಹೇಶ್ವರಪ್ಪ ಎನ್. (ಮದಕರಿ) ಅವರು ಕಳೆದ ಸುಮಾರು 15 ವರ್ಷಗಳಿಂದ ಶಿವಮೊಗ್ಗ ಜಿಲ್ಲಾ ಗೃಹರಕ್ಷಕ ದಳದಲ್ಲಿ ಹೋಂ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ದಿನಾಂಕ 06-03-2026 ರಂದು ಮಹೇಶ್ವರಪ್ಪ ಅವರನ್ನು ಕರ್ತವ್ಯ ಸಂಬಂಧ ಶಿವಮೊಗ್ಗಕ್ಕೆ ಕರೆಯಿಸಿಕೊಂಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಚೇತನ್ ಕುಮಾರ್ ಅವರು ಮಾತಿನ ಸಂದರ್ಭದಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೆನ್ನೆ ಹಾಗೂ ಕಿವಿ ಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದ್ದು ಹಲ್ಲೆಯಿಂದಾಗಿ ಮಹೇಶ್ವರಪ್ಪ ಅವರಿಗೆ ದೇಹದಲ್ಲಿ ರಕ್ತದೊತ್ತಡ ಏರುಪೇರಾಗಿ ಆರೋಗ್ಯ ಸಮಸ್ಯೆ ಉಂಟಾಗಿ ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಪ್ರಕರಣ ಸಂಬಂಧ ಹೆಚ್‌ಎಂಆರ್ ಅನ್ನು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಇದರ ನಡುವೆಯೇ ಪೊಲೀಸರು ಆಸ್ಪತ್ರೆಗೆ ಬಂದು ಮಹೇಶ್ವರಪ್ಪ ಅವರ ಹೇಳಿಕೆ ಪಡೆದುಕೊಂಡಿದ್ದು, ಬಳಿಕ ಮೇಲಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ ಮೇಲಾಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಲು ವೀಡಿಯೋ ಸಾಕ್ಷ್ಯ ಬೇಕು ಎಂದು ಹೇಳಿ ಎಫ್‌ಐಆರ್ ದಾಖಲಿಸಲು ಪೊಲೀಸರು ಮುಂದಾಗಿಲ್ಲ ಎಂದು ಮಲ್ಲೇಶಪ್ಪ ಆರೋಪಿಸಿದರು.

ಜಾತಿ ನಿಂದನೆ ಮಾಡಿರುವುದು ಹಾಗೂ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ದೈಹಿಕ ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ಕಮಾಂಡೆಂಟ್ ಚೇತನ್ ಕುಮಾರ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಅವರನ್ನು ಸೇವೆಯಿಂದ ವಜಾಗೊಳಿಸಿ ಆದಿವಾಸಿ ಹಾಗೂ ಹಿಂದುಳಿದ ವರ್ಗದವರಿಗೆ ನ್ಯಾಯ ಒದಗಿಸಬೇಕೆಂದು ಸಂಘದವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಚ್‌.ಡಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್‌.ಎನ್. ಬಸವೇಶ್, ಹೊಸನಗರ ಘಟಕದ ತಾಲೂಕು ಅಧ್ಯಕ್ಷ ಹಿರಿಯೋಗಿ ಯೋಗೇಂದ್ರಪ್ಪ, ಮಳೂರು ದೇವಪ್ಪ, ಹಲ್ಲೆಗೆ ಒಳಗಾದ ಮಹೇಶ್ವರಪ್ಪ ಹಾಗೂ ಅವರ ಪತ್ನಿ ಮತ್ತು ಗೃಹರಕ್ಷಕ ದಳದ ಹೊಸನಗರ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Exit mobile version