Headlines

ಸರ್ಕಾರಿ ಶಾಲೆಯ ವಿದ್ಯಾರ್ಥಿ ಮೇಲೆ ಶಿಕ್ಷಕರಿಂದ ಹಲ್ಲೆ ಆರೋಪ | ಪೋಷಕರಿಂದ ನ್ಯಾಯಕ್ಕಾಗಿ ಕೂಗು

A shocking incident reported from a government school near Heggodu in Sagar taluk of Shivamogga district, where a 7th-grade student was allegedly beaten by teachers, leaving him injured and bleeding. Parents demand strict action and justice.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಶಡ್ತಿಕೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಿಕ್ಷಕರು ಹಿಗ್ಗಾಮುಗ್ಗಾ ಥಳಿಸಿದ ಆರೋಪ ಕೇಳಿಬಂದಿದೆ. ಈ ಘಟನೆಯಲ್ಲಿ ವಿದ್ಯಾರ್ಥಿ ಗಾಯಗೊಂಡಿದ್ದು, ಕೈ ಬೆರಳುಗಳಿಂದ ರಕ್ತ ಹರಿದಿರುವುದಾಗಿ ಪೋಷಕರು ಆರೋಪಿಸಿದ್ದಾರೆ.

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಸುಶ್ರುತ ಎಂದು ಗುರುತಿಸಲಾಗಿದೆ. ಇದೇ ಶಾಲೆಯ ಸಹಶಿಕ್ಷಕರಾದ ಮೂರ್ತಿ ಬಿ., ಪ್ರಮೋದ್ ಸಣ್ಣಕ್ಕಿ ಹಾಗೂ ಮುಖ್ಯೋಪಾಧ್ಯಾಯ ರಮೇಶ್ ನಾರಾಯಣ್ ಅವರು ಬಾಲಕನ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ.

ಮಾರ್ಚ್ 12 ರಂದು ಬೆಳಿಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಶಾಲೆಯಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ವಿದ್ಯಾರ್ಥಿಯನ್ನೇ ಕಾರಣವೆಂದು ಆರೋಪಿಸಿ, ಶಿಕ್ಷಕರು ಅವನನ್ನು ತರಗತಿ ಕೊಠಡಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಹೊಡೆತದಿಂದ ಬಾಲಕನ ಮೈ ಮೇಲೆ ಬಾಸುಂಡೆಗಳು ಮೂಡಿದ್ದು, ಕೈ ಬೆರಳುಗಳು ಜಜ್ಜಿಕೊಂಡು ರಕ್ತ ಬಂದಿರುವುದಾಗಿ ಹೇಳಲಾಗಿದೆ.

ಘಟನೆ ಬಳಿಕ ಪೋಷಕರು ಬಾಲಕನನ್ನು ವೈದ್ಯರ ಬಳಿ ಕರೆದೊಯ್ಯುತ್ತಿದ್ದಂತೆ, ಅವನಿಗೆ ಸಾಕಷ್ಟು ಪೆಟ್ಟಾಗಿರುವುದರಿಂದ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆಯಿಂದ ಬಾಲಕ ನೋವಿನಿಂದ ನರಳುತ್ತಿರುವುದಾಗಿ ತಿಳಿದುಬಂದಿದೆ. ಬಾಲಕನ ತಂದೆ ಕೃಷ್ಣಮೂರ್ತಿ ಮತ್ತು ತಾಯಿ ಶೈಲಜಾ ಶಿಕ್ಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಹಾಗೂ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದ್ದಾರೆ.

About The Author

Exit mobile version