Three Reserve Police Sub-Inspectors, including one from Thirthahalli, died in a tragic car accident near Sanekere Gate in Chitradurga district after their car rammed into a moving lorry. Two other police officers, including one from Sagar, sustained serious injuries.
ಭೀಕರ ರಸ್ತೆ ಅಪಘಾತ: ತೀರ್ಥಹಳ್ಳಿ ಮೂಲದ ಎಸ್‌ಐ ಸೇರಿ ಮೂವರು ಸಾವು – ಸಾಗರ ಮೂಲದ ಸಿವಿಲ್ ಪಿಎಸ್‌ಐ ಸೇರಿ ಇಬ್ಬರಿಗೆ ಗಂಭೀರ ಗಾಯ
ಚಿತ್ರದುರ್ಗ, ಮಾ.15: ಚಲಿಸುತ್ತಿದ್ದ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ರಿಸರ್ವ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳು (ಆರ್‌ಎಸ್‌ಐ) ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿರುವ ಭೀಕರ ರಸ್ತೆ ಅಪಘಾತ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸಾಣೆಕೆರೆ ಗೇಟ್ ಸಮೀಪ ಭಾನುವಾರ ಬೆಳಿಗ್ಗೆ ಸಂಭವಿಸಿದೆ.
ಮೃತರನ್ನು ಕಾರಟಗಿ ಮೂಲದ ಮಂಜುನಾಥ್ ದಾರಿಮಣಿ (32), ರಾಯಚೂರಿನ ಅಂಬರೀಶ್ ಹಾಗೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಡುವಲ್ಕಿ ಗ್ರಾಮದ ಸಚಿನ್ ಎಂದು ಗುರುತಿಸಲಾಗಿದೆ. ಇವರು ಮೂವರೂ ಬೆಂಗಳೂರಿನ ರಿಸರ್ವ್ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದರು.
ಮದುವೆ ಕಾರ್ಯಕ್ರಮಕ್ಕೆ ಹಾಜರಾಗುವ ಸಲುವಾಗಿ ಐವರು ಕಾರಿನಲ್ಲಿ ಬಳ್ಳಾರಿಗೆ ತೆರಳುತ್ತಿದ್ದ ವೇಳೆ ಮುಂಜಾನೆ ಸುಮಾರು 7.50ರ ವೇಳೆಗೆ ಶ್ರೀರಂಗಪಟ್ಟಣ–ಬೀದರ್ ರಾಷ್ಟ್ರೀಯ ಹೆದ್ದಾರಿಯ ಸಾಣೆಕೆರೆ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಚಲಿಸುತ್ತಿದ್ದ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಲಾರಿ ಕೆಳಗೆ ಸಿಲುಕಿಕೊಂಡು ಕೆಲವು ದೂರ ಎಳೆದುಕೊಂಡು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮಂಜುನಾಥ್ ದಾರಿಮಣಿ, ಅಂಬರೀಶ್ ಹಾಗೂ ಸಚಿನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಾಗರ ತಾಲೂಕಿನ ಹುರುಳಗಲ್ಲು ಗ್ರಾಮದ ಸಿವಿಲ್ ಪಿಎಸ್‌ಐ ಈಶ್ವರ್ ಹಾಗೂ ಬೆಂಗಳೂರು ಮೂಲದ ಆರ್‌ಎಸ್‌ಐ ಮಹಾಂತೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಭಾರೀ ಹಾನಿಗೊಳಗಾದ ಕಾರಣ ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಸಾಕಷ್ಟು ಹರಸಾಹಸ ಪಡಬೇಕಾಯಿತು. ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಚಳ್ಳಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಮಧ್ಯೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಘಟನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಅಪಘಾತದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.




