Headlines

ಅನುದಾನಿತ ಶಾಲೆಗಳಿಗೆ ಸರ್ಕಾರದಿಂದಲೇ ಅತಿಥಿ ಶಿಕ್ಷಕರ ನೇಮಕ: ಮಧು ಬಂಗಾರಪ್ಪ

ಅನುದಾನಿತ ಶಾಲೆಗಳಿಗೆ ಸರ್ಕಾರದಿಂದಲೇ ಅತಿಥಿ ಶಿಕ್ಷಕರ ನೇಮಕ: ಮಧು ಬಂಗಾರಪ್ಪ

ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಒಂದು ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸರ್ಕಾರದಿಂದಲೇ ಅತಿಥಿ ಶಿಕ್ಷಕರ ನೇಮಕ ಮಾಡಲಾಗುತ್ತದೆ.

ಹೌದು.. ಈ ಕುರಿತು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರೇ ಮಾಹಿತಿ ನೀಡಿದ್ದಾರೆ. ಕನ್ನಡ ಮಾಧ್ಯಮದ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸರ್ಕಾರದಿಂದಲೇ ಅತಿಥಿ ಶಿಕ್ಷಕರ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಪ್ರೆಸ್‌ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ಅನುದಾನಿತ ಶಾಲೆಗಳ 6 ಸಾವಿರ ಹಾಗೂ ಸರ್ಕಾರಿ ಶಾಲೆಗಳ 12 ಸಾವಿರ ಸೇರಿದಂತೆ 18 ಸಾವಿರ ಶಿಕ್ಷಕರ ನೇಮಕಕ್ಕೆ ಶೀಘ್ರ ಅಧಿಸೂಚನೆ ಹೊರಡಿಸಲಾಗುತ್ತಿದೆ. ಅದರ ಹೊರತಾಗಿ ಅನುದಾನಿತ ಶಾಲೆಗಳಲ್ಲಿ ಖಾಲಿ ಉಳಿಯುವ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಆಯಾ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.

ಅನುದಾನಿತ ಶಾಲೆಗಳಿಗೆ 4 ರಿಂದ 5 ಸಾವಿರ ಅತಿಥಿ ಶಿಕ್ಷಕರನ್ನು ಬಹುಶಃ ನೇಮಕ ಮಾಡಬೇಕಾಗುತ್ತದೆ. ಅವರಿಗೆ ಗೌರವಧನ ಸರ್ಕಾರದಿಂದಲೇ ಪಾವತಿಸಲಾಗುವುದು. ಕನ್ನಡ ಮಾಧ್ಯಮದ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.

ಇನ್ನು 1995ರ ನಂತರದ ಅಂದರೆ 10 ವರ್ಷಗಳ ಅವಧಿಯ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ. ಆ ಪ್ರಸ್ತಾವಕ್ಕೆ ಸಿಎಂ ಸಿದ್ದರಾಮಯ್ಯ ಅನುಮತಿ ಕೊಡುತ್ತಿದ್ದಂತೆಯೇ ಪ್ರಕ್ರಿಯೆ ಆರಂಭಿಸಲಾಗುವುದು. ಇನ್ನು ಅಂಗವಿಕಲ ಮಕ್ಕಳಿಗೆ ಚಿಕಿತ್ಸೆ ಹಾಗೂ ಶಿಕ್ಷಣ ಎರಡಕ್ಕೂ ಅವಕಾಶವಾಗಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎರಡು ವಸತಿಯುತ ಶಾಲೆ ಆರಂಭಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ರಜೆ ವಿಸ್ತರಣೆ: 

ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ (ಜಾತಿಗಣತಿ) ಪೂರ್ವ ನಿಗದಿಯಂತೆ ಸರ್ವೇ ಕಾರ್ಯ ಮುಗಿಯಬೇಕಿತ್ತು. ಆದರೆ ಸಮೀಕ್ಷೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಮೀಕ್ಷೆ ಕೈಗೊಳ್ಳುವ ಅವಧಿಯನ್ನು ವಿಸ್ತರಿಸಿದ್ದು, ಈ ನಿಟ್ಟಿನಲ್ಲಿ ಅ.18 ರ ವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ದಸರಾ ರಜೆಯನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.

ಸಮೀಕ್ಷೆದಾರರ ಬೇಡಿಕೆಯಂತೆ ಸಮೀಕ್ಷೆಯ ಅವಧಿ ವಿಸ್ತರಣೆ ಹಾಗೂ ಶಾಲೆಗಳ ರಜಾ ದಿನಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ನಡೆದ ಸಭೆ ಬಳಿಕ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಿಎಂ ಮಾಹಿತಿ ನೀಡಿದ್ದರು.

ಇದೇ ವೇಳೆ ಅ.19 ರೊಳಗೆ ಸರ್ವೇ ಮುಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ ಸಿಎಂ ಅವರು, ಯಾರು ಉದ್ದೇಶಪೂರ್ವಕವಾಗಿ ಸಮೀಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೋ ಅಂತವರ ವಿರುದ್ಧ ಸರ್ಕಾರ ಶಿಸ್ತುಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಇದೇ ವೇಳೆ ಎಚ್ಚರಿಕೆ ನೀಡಿದರು. ಒಂದು ದಿನಕ್ಕೆ ಕನಿಷ್ಠ 10 ರಿಂದ 15 ಮನೆಗಳ ಸಮೀಕ್ಷೆ ಮುಗಿಸಬೇಕು. ಸರ್ಕಾರಿ ಮತ್ತು ಅನುದಾನಿತ ಎಲ್ಲಾ ಶಾಲೆಗಳಿಗೆ ದಸರಾ ರಸ್ತೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ದರಿಸಲಾಗಿದೆ ಎಂದಿದ್ದರು.

Exit mobile version