ಕಗಚಿ ಬಳಿ ಕಾಡಾನೆ ದಾಳಿ: ತೋಟ–ಗದ್ದೆ ನಾಶ, ಗ್ರಾಮಸ್ಥರಲ್ಲಿ ಆತಂಕ
ರಿಪ್ಪನ್ ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗಚಿ ಗ್ರಾಮದಲ್ಲಿ ಕಾಡಾನೆಯೊಂದು ದಾಳಿ ನಡೆಸಿ ತೋಟ ಮತ್ತು ಗದ್ದೆಗಳನ್ನು ನಾಶಪಡಿಸಿದ ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಭಯಭೀತಿಯ ವಾತಾವರಣ ನಿರ್ಮಾಣವಾಗಿದೆ.
ಕಗಚಿ ಗ್ರಾಮದ ನಿವಾಸಿ ಡಾಕಪ್ಪ ಬಿನ್ ಪುಟ್ಟಪ್ಪ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಅಡಿಕೆ ಹಾಗೂ ಬಾಳೆಗಿಡಗಳನ್ನು ಮುರಿದು ಸಂಪೂರ್ಣವಾಗಿ ಹಾನಿಗೊಳಿಸಿದೆ. ಅಲ್ಲದೆ ತೋಟದ ಅಕ್ಕಪಕ್ಕದಲ್ಲಿರುವ ಗದ್ದೆಗಳಿಗೂ ಗಂಭೀರ ಹಾನಿ ಉಂಟಾಗಿದೆ.
ಗುರುವಾರ ರಾತ್ರಿ ತಳಲೆ ಹಾಗೂ ಕಗಚಿ ಭಾಗಗಳಲ್ಲಿ ತಿರುಗಾಡಿದ ಕಾಡಾನೆ, ಲದ್ದಿ ಹಾಕಿಕೊಂಡು ತೋಟದ ಪ್ರದೇಶಕ್ಕೆ ಪ್ರವೇಶಿಸಿ ಡಾಕಪ್ಪ ಅವರ ತೋಟವನ್ನು ನಾಶಪಡಿಸಿ ನಂತರ ಸಮೀಪದ ಗದ್ದೆಗಳಿಗೂ ಹಾನಿ ಮಾಡಿರುವುದಾಗಿ ತಿಳಿದುಬಂದಿದೆ.
ಸತತ ಕಾಡಾನೆ ಸಂಚಾರದಿಂದ ಗ್ರಾಮಸ್ಥರು ಆತಂಕದಲ್ಲಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಆನೆ ನಿಯಂತ್ರಣ ಹಾಗೂ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.




