ಯಾವುದೇ ಒಂದು ಗ್ರಾಮ, ನಗರದ ಅಭಿವೃದ್ಧಿಗೆ ಆ ಭಾಗವನ್ನು ಪ್ರತಿನಿಧಿಸುವ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು,ಅಧಿಕಾರಿ ಜೊತೆ ಗ್ರಾಮಸ್ಥರ ಸಹಕಾರ ಇದ್ದಾಗ ಮಾತ್ರ ನಿರೀಕ್ಷಿತ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತದೆ. ಅದರ ಜೊತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆ ಊರಿನ ಅಭಿವೃದ್ಧಿ ಕುಂಠಿತಕ್ಕೂ ಬೆರಳೆಣಿಕೆ ಗ್ರಾಮಸ್ಥರೇ ಕಾರಣರಾಗುತ್ತಾರೆ ಎನ್ನುವುದಕ್ಕೆ ನಮ್ಮ ಗ್ರಾಮ ನಿದರ್ಶನ’ ಎನ್ನುತ್ತಾರೆ ರಿಪ್ಪನ್‌ಪೇಟೆ ಪಟ್ಟಣದ ಅಭಿವೃದ್ಧಿ ಪರ ಚಿಂತಕರು.
ಹೌದು ರಿಪ್ಪನ್‌ಪೇಟೆ ಪಟ್ಟಣದ ಅಭಿವೃದ್ಧಿಯ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಆಸಕ್ತಿಯಿಂದ ನಾಲ್ಕು ರಸ್ತೆಗಳನ್ನು ಅಗಲೀಕರಣಗೊಳಿಸಿ ಪಟ್ಟಣವನ್ನು ಸುಂದರವನ್ನಾಗಿಸುವ ಪ್ರಯತ್ನದ ಮೊದಲ ಹಂತವಾಗಿ ಸಾಗರ ರಸ್ತೆ ಅಗಲೀಕರಣ ಕಾಮಗಾರಿ ಸುಮಾರು 5.50 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ. ಈ ಅಭಿವೃದ್ಧಿ ಕೆಲಸಕ್ಕೆ ಪಟ್ಟಣದ ಶೇ 99%ರಷ್ಟು ಕಟ್ಟಡ ವಾರಸುದಾರರು ಸ್ವಯಂ ಪ್ರೇರಣೆಯಿಂದ ಕಟ್ಟಡ ತೆರವುಗೊಳಿಸಿದ್ದಾರೆ ಆದರೆ ಬೆರಳಣಿಕೆ ವ್ಯಾಪಾರಸ್ಥರು ಮಾತ್ರ ತೆರವುಗೊಳಿಸುವುದಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣ ಎಂದೋ ಪೂರ್ಣಗೊಳ್ಳಬೇಕಿದ್ದ ರಸ್ತೆ ಕಾಮಗಾರಿ ಕುಂಠಿತಗೊಂಡಿದೆ.
ರಿಪ್ಪನ್‌ಪೇಟೆ ಪಟ್ಟಣದ ಸಾಗರ ರಸ್ತೆಯಲ್ಲಿರುವ ಗಾಯತ್ರಿ ಚಂದ್ರಪ್ಪ ಎಂಬುವವರ ಮಾಲೀಕತ್ವದ ಗಣೇಶ್ ಸ್ಟೀಲ್ ಅಂಡ್ ಹೋಮ್ ಅಪ್ಲಾಯನ್ಸ್ ಅಂಗಡಿಯ ಕಟ್ಟಡ ರಸ್ತೆ ಕಾಮಗಾರಿಗೆ ಅಡ್ಡಲಾಗಿ ಇದ್ದರೂ ಅಧಿಕಾರಿಗಳ ಇಚ್ಚಾ ಶಕ್ತಿ ಕೊರತೆಯಿಂದ ಆ ಕಟ್ಟಡ ತೆರವುಗೊಳಿಸಲು ಯಾರು ಮುಂದಾಗದೇ ಇರುವುದು ವಿಪರ್ಯಾಸವಾಗಿದೆ ಈ ಬಗ್ಗೆ ಗ್ರಾಪಂ ಪಿಡಿಒ ರವರಿಗೆ ಮನವಿ ಸಲ್ಲಿಸಿದ್ದೇನೆ ಎನ್ನುತ್ತಾರೆ ಗ್ರಾಪಂ ಮಾಜಿ ಉಪಾಧ್ಯಕ್ಷ ರವೀಂದ್ರ ಕೆರೆಹಳ್ಳಿ.
ಈ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೆ ಆ ಕಟ್ಟಡದ ಮಾಲೀಕ ಕೋರ್ಟ್ ಮೊರೆ ಹೋಗಿದ್ದು ಕಟ್ಟಡಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂಬ ಸಬೂಬು ಹೇಳುತ್ತಾರೆ ಆದರೆ ಇಲ್ಲಿರುವ ಪ್ರಶ್ನೆ ಏನೇಂದರೇ ಕಳೆದ ಹತ್ತು ವರ್ಷಗಳ ಹಿಂದೇಯೇ ಚರಂಡಿ ನಿರ್ಮಾಣ ಸಮಯದಲ್ಲಿ ಕಟ್ಟಡದ ಮಾಲೀಕರು ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರೂ ಅಧಿಕಾರಿಗಳು ಯಾಕೆ ಇನ್ನೂ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತೆರವಿಗೆ ಮುಂದಾಗಿಲ್ಲ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.!!
ಮೂಲಗಳ ಪ್ರಕಾರ ಗಾಯತ್ರಿ ಚಂದ್ರಪ್ಪ ಎಂಬುವವರಿಗೆ ಹಕ್ಕುಪತ್ರ ಮಂಜೂರಾಗಿರುವುದು 40×60 ಜಾಗಕ್ಕೆ ಮಾತ್ರ ಆದರೆ ಪ್ರಸಕ್ತ ಕಟ್ಟಡ ಇರುವುದು ಲೋಕೋಪಯೋಗಿ ಇಲಾಖೆಯ ಜಾಗವಾಗಿದ್ದು ಇದಕ್ಕೆ ಕೋರ್ಟ್ ಸ್ಟೇ ಅನ್ವಯಿಸುವುದಿಲ್ಲಾ ಅಷ್ಟೂ ಜ್ಞಾನವಿಲ್ಲದ ಅಧಿಕಾರಿಗಳು ಕಟ್ಟಡ ಮಾಲೀಕನ ಕುರುಡು ಕಾಂಚಾಣಕ್ಕೆ ಬಲಿಯಾಗಿದ್ದಾರೆ ಎನ್ನುತ್ತಾರೆ ಸ್ಥಳೀಯರು…
ಲೋಕೋಪಯೋಗಿ ಇಲಾಖೆಯವರು ಗ್ರಾಮ ಪಂಚಾಯತಿಯವರು ತೆರವುಗೊಳಿಸಿ ಕೊಡಲಿ ಎಂದು ಸಬೂಬು ಹೇಳುತಿದ್ದು ಈಗ ಬಂದಿರುವ ಮಾಹಿತಿ ಪ್ರಕಾರ ಸಾಗರ ರಸ್ತೆಯ ಕಾಮಗಾರಿಯನ್ನು ಮೈಸ್ ಕಂಪ್ಯೂಟರ್ ಸೆಂಟರ್ ವರೆಗೂ ಮಾತ್ರ ಮುಗಿಸಿ ತೀರ್ಥಹಳ್ಳಿ ರಸ್ತೆಯ ಕಾಮಗಾರಿ ಪ್ರಾರಂಭಿಸುತ್ತಾರೆ ಎನ್ನಲಾಗುತ್ತಿದೆ.
ಅಧಿಕಾರಿಗಳು ಅನಧಿಕೃತ ಕಟ್ಟಡದ ಮಾಲೀಕರ ಋಣ ಭಾರಕ್ಕೆ ವಿದ್ಯುತ್ ಲೈನ್ ನ್ನು ಅನಧಿಕೃತ ಕಟ್ಟಡಕ್ಕೆ ತೊಂದರೆಯಾಗದಂತೆ ಬೇರೆ ಕಡೆಯಿಂದ ಸಂಪರ್ಕ ನೀಡಲು ದುಬಾರಿ ವೆಚ್ಚದ ಕಂಬ ಹಾಗೂ ಪರಿಕರಗಳನ್ನು ಈಗಾಗಲೇ ತರಿಸಿ ರಸ್ತೆಯ ಇಕ್ಕೆಲಗಳಲ್ಲಿರಿಸಿದ್ದು ನೋಡಿದರೆ ಅಧಿಕಾರಿಗಳು ಪಡೆದ ಲಂಚದ ಹಣದ ನೀಯತ್ತು ಎದ್ದು ಕಾಣುತ್ತಿದೆ.
ಪಟ್ಟಣದ ಅಭಿವೃದ್ಧಿ ಪರ ಚಿಂತಕರು ಈಗಾಗಲೇ ಈ ವಿಚಾರವನ್ನು ಶಾಸಕ ಬೇಳೂರು ಗೋಪಾಲಕೃಷ್ಣ ಗಮನಕ್ಕೆ ತಂದಿದ್ದು ಶಾಸಕರು ಕೂಡಲೇ ಕಟ್ಟಡ ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಮಲ್ಲಿಕಾರ್ಜುನ್ ರವರಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆಯಾಗಿ ಊರಿನ ಅಭಿವೃದ್ಧಿಗಾಗಿ ಶೇ .99% ರಷ್ಟು ಗ್ರಾಮಸ್ಥರು ಸಹಕಾರ ನೀಡಿ ಕೇವಲ ಬೆರಳೆಣಿಕೆ ವ್ಯಕ್ತಿಗಳು ಊರಿನ ಅಭಿವೃದ್ಧಿಗೆ ಅಡ್ದಗಾಲಾಗಿ ನಿಂತಿರುವುದು ಪಟ್ಟಣದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು ಕೂಡಲೇ ಅಧಿಕಾರಿಗಳು ಕಟ್ಟಡ ತೆರವುಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅನಧಿಕೃತ ಕಟ್ಟಡದ ಮುಂದೆ ಹೋರಾಟ ನಡೆಸಬೇಕಾಗುತ್ತದೆ ಎಂದು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಶ್ರೀಧರ್ ಚಿಗುರು ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವನ್ನು ಶಾಸಕರ ಗಮನಕ್ಕೆ ತಂದಿದ್ದು ಲೋಕೋಪಯೋಗಿ ಇಲಾಖೆಯ ಅಭಿಯಂತರರೊಂದಿಗೆ ಚರ್ಚಿಸಿ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳಲಾಗುವುದು.– ಧನಲಕ್ಷ್ಮಿ ಗಂಗಾಧರ್ಅಧ್ಯಕ್ಷರು ಗ್ರಾಪಂ ರಿಪ್ಪನ್‌ಪೇಟೆ
ಪಟ್ಟಣದ ಅಭಿವೃದ್ಧಿಗಾಗಿ ಎಲ್ಲಾ ಕಟ್ಟಡದ ಮಾಲೀಕರು ತಾವೇ ಸ್ವತಃ ಕಟ್ಟಡ ತೆರವುಗೊಳಿಸಿರುವುದು ಸಂತಸದ ವಿಷಯ, ಊರಿನ ಅಭಿವೃದ್ಧಿ ದೃಷ್ಟಿಯಿಂದ ತಮ್ಮ ಕಟ್ಟಡವನ್ನು ತೆರವುಗೊಳಿಸಲು ಸಿದ್ದನಿದ್ದೇನೆ ಆದರೆ ಕಾನೂನು ಎಲ್ಲಾರಿಗೂ ಒಂದೇ ತರಹ ಇರಲಿ ಎನ್ನುವುದೇ ನಮ್ಮ ಆಶಯ..– ಎಂ ಬಿ ಮಂಜುನಾಥ್ಗಣೇಶ್ ಮೆಟಲ್ ಸ್ಟೋರ್ ಪಕ್ಕದ ಕಟ್ಟಡದ ಮಾಲೀಕರು
ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸಿದ ಹಾಗೇ ವಿದ್ಯುತ್ ಗುತ್ತಿಗೆದಾರ ಬೆಳ್ಳೂರು ನಾಗರಾಜ್ ರಸ್ತೆಗೆ ಅಡ್ಡಲಾಗಿ ನಾಲ್ಕು ಬೃಹತ್ ಕಂಬಗಳನ್ನು ತಂದು ಹಾಕಿದ್ದರಿಂದ ಈಗಾಗಲೇ ಹಲವಾರು ಅಪಘಾತಗಳು ನಡೆದು ಪಾದಚಾರಿಗಳು ಗಾಯ ಮಾಡಿಕೊಂಡಿದ್ದಾರೆ ಕೂಡಲೇ ಈ ಕಂಬಗಳನ್ನು ತೆರವುಗೊಳಿಸಬೇಕು– ಶಿವಕುಮಾರ್ ಭಟ್ಮಾಲೀಕರು ಸೂರಜ್ ಪೈಂಟ್ಸ್