Breaking
12 Jan 2026, Mon

ಇಂದಿನ ಕಾಲಘಟ್ಟದಲ್ಲಿ ಮಾದ್ಯಮಗಳು ನಿಖರ ಸುದ್ದಿ ಮತ್ತು ಜ್ಞಾನವನ್ನು ಪ್ರಸರಿಸುವ ಕಾರ್ಯ ನಿರ್ವಹಿಸಬೇಕಾಗಿದೆ – ಹರತಾಳು ಹಾಲಪ್ಪ|sagara

ಸಾಗರ : ಸರ್ಕಾರದ ನಾಲ್ಕು ಅಂಗಗಳಲ್ಲಿ ನಾಲ್ಕನೆಯ ಅಂಗವಾದ ಮಾದ್ಯಮ ರಂಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಈಗಿನ ಕಾಲಘಟ್ಟದಲ್ಲಿ ಮಾದ್ಯಮಗಳು ನಿಖರ ಸುದ್ದಿ ಮತ್ತು ಜ್ಞಾನವನ್ನು ಪ್ರಸರಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.




ಪಟ್ಟಣದ ಗಾಂಧಿ ಮೈದಾನದಲ್ಲಿ ಮಲೆನಾಡು ರಹಸ್ಯ ವಾರಪತ್ರಿಕೆ ,ಸುದ್ದಿಮನೆ ಹಾಗೂ ಗ್ಲೋಬಲ್ ಡಿಜಿಟಲ್ ಮೀಡಿಯಾ ಆಯೋಜಿಸಿದ್ದ ವಾರ್ಷಿಕ ಸಂಭ್ರಮಾ‍ಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಸಮಸ್ಯೆಗಳನ್ನು ನೇರವಾಗಿ ಓದುಗರಿಗೆ ತಲುಪಿಸುವ, ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಈ ಪತ್ರಿಕೆಗಳು ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿವೆ.ಮುಂದಿನ ದಿನಗಳಲ್ಲಿ ಈ ನಾಡಿಗೆ ಇವರ ಸೇವೆ ಹೀಗೆ ಮುಂದುವರೆಯಲಿ ಎಂದರು.


ಮಲೆನಾಡು ರಹಸ್ಯ ವಾರಪತ್ರಿಕೆ ,ಸುದ್ದಿಮನೆ ಹಾಗೂ ಗ್ಲೋಬಲ್ ಡಿಜಿಟಲ್ ಮೀಡಿಯಾ ಸಮಾಜದ ತಪ್ಪುಗಳನ್ನು ತಿದ್ದಿ ತೀಡುವ ಕೆಲಸ ಮಾಡುತ್ತಿವೆ.ಸಮಾಜದ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿವೆ. ಮುಂದಿನ ದಿನಗಳಲ್ಲಿ ಸಮಾಜದ ಮೂಲಭೂತ ಸೌಕರ್ಯಗಳ ಕುಂದುಕೊರತೆಗಳ ಬಗ್ಗೆ ಗಮನಹರಿಸುವ ಕೆಲಸವನ್ನು ಇನ್ನೂ ಹೆಚ್ಚು ಹೆಚ್ವು ಮಾಡುವುದರ ಮೂಲಕ ಸರ್ಕಾರದ ನಾಲ್ಕನೇ ಅಂಗವಾಗಿ ಕಾರ್ಯ ನಿರ್ವಹಿಸಲಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂತೋಷ್ ಸದ್ಗುರು ಈ ದೇಶದ ಚಳವಳಿಗೆ ಪತ್ರಿಕೆಗಳು ಏನೆಲ್ಲಾ ಕೊಡುಗೆ ನೀಡಿವೆ ಎಂಬುದನ್ನು ನಾವು ಗಮನಿಸಬೇಕು. ಚಳವಳಿಗೆ ಪ್ರೇರಣೆ ನೀಡಿದ್ದೇ ಪತ್ರಿಕೆಗಳು. ಕಾಲ ಬದಲಾದಂತೆ ಮಾಧ್ಯಮ ಕ್ಷೇತ್ರವೂ ಬದಲಾಗುತ್ತಿದ್ದು, ಜಾಹಿರಾತನ್ನು ಅವಲಂಬಿಸುವುದು ಈಗ ಅನಿವಾರ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಓದುಗರು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದೇ ರೀತಿ ಪತ್ರಕರ್ತನಾದವನು ಸಹ ಸದಾ ಓದುವುದರಲ್ಲಿ ಮಗ್ನರಾಗಿರಬೇಕು ಎಂದರು.




ನಮ್ಮ ಸಮಾಜದಲ್ಲಿ ಅನೇಕ ಸಮಸ್ಯೆಗಳಿವೆ. ಈ ಸಮಸ್ಯೆಗಳಲ್ಲಿ ಶೋಷಿತರ ಸಮಸ್ಯೆಯೂ ಒಂದು. ಇವರಿಗೆ ದನಿ ಬಂದದ್ದು 12ನೇ ಶತಮಾನದಲ್ಲಿ ಹಾಗೂ ಕನಕದಾಸರ ಕಾಲದಲ್ಲಿ. 12ನೇ ಶತಮಾನದ ಬಸವಣ್ಣ ಶೋಷಿತವರ್ಗಕ್ಕೆ ಒಂದು ದಾರಿ ತೋರಿಸಿದರು. ಅಲ್ಲಿಯವರೆಗೆ ಅವರೆಲ್ಲ ಹೊರಗೆ ಬರದಂತೆಯಿದ್ದರು. ಅದೇ ರೀತಿ ಇಂದು ಸಹ ಪತ್ರಿಕೆಗಳು ಬೆಳವಣಿಗೆಯಾದಂತೆ ಶೋಷಿತರನ್ನು ಗುರುತಿಸುವುದು ಸಾಧ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಲೆನಾಡು ರಹಸ್ಯ ಪತ್ರಿಕೆ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.


ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಡನಬೈಲು ಕ್ಷೇತ್ರದ ಧರ್ಮದರ್ಶಿಗಳಾದ ವೀರರಾಜಯ್ಯ ಜೈನ್ ವಹಿಸಿದ್ದರು.

ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಕಾಶ್ ಬಸ್ ಮಾಲೀಕರಾದ ದಿ|| ಪ್ರಕಾಶ್ ಕೆ ಬಿ ರವರಿಗೆ ಮರಣೋತ್ತರ ಮಲೆನಾಡ ಸೇವಾರತ್ನ ಪ್ರಶಸ್ತಿಯನ್ನು ಅವರ ಕುಟುಂಬಸ್ಥರಿಗೆ ವಿತರಿಸುವ ವೇಳೆಯಲ್ಲಿ ವೇದಿಕೆಯಲ್ಲಿ ಭಾವುಕತೆ ಉಕ್ಕಿ ಹರಿದಿತ್ತು.


ನಂತರ ಸಾಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಶಾಲೆಯ ಮಕ್ಕಳಿಂದ ಅತ್ಯಾಕರ್ಷಕ ನೃತ್ಯ,ಡೊಳ್ಳು ,ಕರಾಟೆ ಕಾರ್ಯಕ್ರಮಗಳು ಬಹಳ ಅಧ್ಬುತವಾಗಿ ಮೂಡಿಬಂದವು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡು ರಹಸ್ಯ ಪತ್ರಿಕೆಯ ಸಂಪಾದಕ ರಫ಼ೀಕ್ ಕೊಪ್ಪ ಮತ್ತು ಸುದ್ದಿಮನೆಯ ಸೈಯದ್ ಜಮೀಲ್ ವಹಿಸಿದ್ದರು.




ಈ ಸಂಧರ್ಭದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ,ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ ,ಉದ್ಯಮಿ ಸೈಯದ್ ಜಹೂರ್ ,ನಗರಸಭೆ ಸದಸ್ಯ ಸೈಯದ್ ಜಾಕೀರ್ ,ಉದ್ಯಮಿ ಸಿಸಿಲ್ ಸೋಮನ್ ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪರಮೇಶ್ವರ್ ಉಪಸ್ಥಿತರಿದ್ದರು.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Leave a Reply

Your email address will not be published. Required fields are marked *

Exit mobile version