ತೀರ್ಥಹಳ್ಳಿ : ರಾಷ್ಟ್ರ ಕವಿ ಕುವೆಂಪು ಅವರನ್ನು ಅವಹೇಳನ ಮಾಡಿ ಪಠ್ಯ ಪುಸ್ತಕ ವಿಚಾರದಲ್ಲಿ ಪ್ರತಿಭಟನೆಯಾಗುವಂತೆ ಮಾಡಿದ ಮತಾಂಧ ಅಂದರು ತಪ್ಪಿಲ್ಲ ಅಂತಹ ಕೆಲಸ ಮಾಡಿರುವ ರೋಹಿತ್ ಚಕ್ರತೀರ್ಥ ಅವರನ್ನು ತೀರ್ಥಹಳ್ಳಿಗೆ ಕರೆಸಿ ಕಾರ್ಯಕ್ರಮ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಇದೊಂದು ಬಿಜೆಪಿ ಪ್ರಯೋಜಿತ ಕಾರ್ಯಕ್ರಮ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ವೆಂಕಟೇಶ್ ಹೆಗ್ಡೆ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ಡಿ.28 ಕ್ಕೆ ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿ ಆಗಮಿಸುತ್ತಿದ್ದು ಆ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಏನೆಲ್ಲಾ ಮಾಡಬೇಕೋ ಅದನ್ನ ಬಿಜೆಪಿ ಪಕ್ಷದವರು ಮಾಡುತ್ತಿದ್ದಾರೆ. ನಮ್ಮ ನಾಡಿನ ಮೇರು ಕವಿಯನ್ನು ಚಕ್ರತೀರ್ಥ ಅವಮಾನ ಮಾಡಿದ್ದಾರೆ. ಕುವೆಂಪು ಅವರ ಬಗ್ಗೆ ನಾವು ಶಾಲೆಗಳಿಂದಲೂ ಕೂಡ ಓದಿ ಅವರ ಬಗ್ಗೆ ಕೇಳಿ ಅದನ್ನು ನಾವೆಲ್ಲರೂ ಮೈಗೂಡಿಸಿಕೊಂಡಿದ್ದೇವೆ. ಈಗಲೂ ಸಮಯಾವಕಾಶ ಇದ್ದು ರಾಷ್ಟ್ರಕವಿಯನ್ನು ಅವಮಾನ ಮಾಡಿದಂತ ರೋಹಿತ್ ಚಕ್ರತೀರ್ಥರನ್ನು ಕರೆಸದಂತೆ ರಾಮೇಶ್ವರ ದೇವರು ಬಿಜೆಪಿಯವರಿಗೆ ಬುದ್ದಿ ನೀಡಲಿ ಹಾಗೂ ಕುವೆಂಪು ಅವರ ಜನ್ಮದಿನ ಡಿ. 29 ಕ್ಕೆ ಇದ್ದು ಅದರ ಹಿಂದಿನ ದಿನ ಇಂತಹವರು ಕುವೆಂಪು ಅವರ ಜನ್ಮಸ್ಥಳಕ್ಕೆ ಬರುತ್ತಿರುವುದನ್ನು ನಮ್ಮ ಎಲ್ಲಾ ಸಂಘಟನೆಗಳು ಸುತರಾಂ ಒಪ್ಪುವುದಿಲ್ಲ ಎಂದರು.
ನೆಂಪೆ ದೇವರಾಜ್ ಮಾತನಾಡಿ ಭಾರತ ಜನನಿಯ ತನುಜಾತೆ ಎನ್ನುವ ಕವಿತೆಯನ್ನು ಯಾರು ಭಾರತಕ್ಕೆ ದೇಶಕ್ಕೆ ನೀಡಿದರೋ ಅಂತಹ ವ್ಯಕ್ತಿಯನ್ನು ಅವಮಾನ ಮಾಡಿ ಆ ಸಾಹಿತ್ಯವನ್ನೇ ತಿರುಚಿದ ವ್ಯಕ್ತಿಯನ್ನು ತೀರ್ಥಹಳ್ಳಿಗೆ ಕರೆಸುತ್ತಿದ್ದಾರೆ. ಚುನಾವಣೆಯ ಮತಕ್ಕಾಗಿ ಆತನನ್ನು ಕರೆಸುತ್ತಿದ್ದಾರೆ. ಆದರೆ ಕುವೆಂಪು ಅವರನ್ನು ಅವಮಾನ ಮಾಡಿದವನನ್ನು ಮತಕ್ಕಾಗಿ ಕರೆಸಬಾರದು. ರಾಜಕೀಯ ಅಜೆಂಡಾ ಏನೇ ಇದ್ದರೂ ಚುನಾವಣೆಯಲ್ಲಿ ತೋರಿಸಿ ಆದರೆ ಕುವೆಂಪು ಅವರ ವಿಷಯವನ್ನು ಇಟ್ಟುಕೊಂಡು ರಾಜಕೀಯ ಮಾಡಬೇಡಿ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ಚಕ್ರತೀರ್ಥರನ್ನು ಆಯ್ಕೆ ಮಾಡಿದ್ದೆ ಡಬಲ್ ಇಂಜಿನ್ ಸರ್ಕಾರ ಮಾಡಿರುವ ತಪ್ಪು. ತನ್ನ ತಪ್ಪುಗಳನ್ನು ಬಿಜೆಪಿಯವರು ಇಲ್ಲಿಯವರೆಗೆ ಒಪ್ಪಿಕೊಂಡಿಲ್ಲ. ಕುವೆಂಪು ಅವರನ್ನು ಅವಮಾನ ಮಾಡಿರುವ ಚಕ್ರತೀರ್ಥ ಈ ತಾಲೂಕಿಗೆ ಕಾಲಿಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಾಳೇಹಳ್ಳಿ ಪ್ರಭಾಕರ್, ನೆಂಪೆ ದೇವರಾಜ್, ವೆಂಕಟೇಶ್ ಚಿಪ್ಪಿನಕೊಡಿಗೆ , ವೆಂಕಟೇಶ್ ಹೆಗ್ಡೆ , ಪಡುವಳ್ಳಿ ಹರ್ಷೇಂದ್ರ, ನಿಶ್ಚಲ್ ಜಾದೂಗಾರ್ ಸೇರಿ ಹಲವರು ಉಪಸ್ಥಿತರಿದ್ದರು.
”ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿ ಶ್ರೀ ನಾರಾಯಣ ಗುರುವಿನ ಬಗ್ಗೆ ಪಠ್ಯ ಪುಸ್ತಕ ವಿಚಾರದಲ್ಲಿ ತಿರುಚಿ ರಾಜ್ಯದಲ್ಲಿ ಅಶಾಂತಿಗೆ ಕಾರಣವಾಗಿದ್ದ ರೋಹಿತ್ ಚಕ್ರತೀರ್ಥ ಅವರನ್ನು ತೀರ್ಥಹಳ್ಳಿಗೆ ಕರೆಸಿ ಕಾರ್ಯಕ್ರಮ ಮಾಡಲು ಹೊರಟಿರುವ ಬಿಜೆಪಿ ಪ್ರಯೋಜಿತ ಕಾರ್ಯಕ್ರಮವನ್ನು ತೀರ್ಥಹಳ್ಳಿಯಲ್ಲಿ ಬಹಿಷ್ಕಾರ ಮಾಡಬೇಕು…”
-ವೆಂಕಟೇಶ್ ಹೆಗ್ಡೆ
ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರು
”ನಮ್ಮ ತಾಲೂಕಿನ ಹೆಮ್ಮೆಯ ಪುತ್ರ, ರಾಷ್ಟ್ರದ ಕವಿ ಕುವೆಂಪು ಅವರಿಗೆ ರೋಹಿತ್ ಚಕ್ರ ತೀರ್ಥ
ಅಪಮಾನ ಮಾಡಿದ್ದು ನಮ್ಮ ತಾಲೂಕಿನ ಜನರಿಗೆ ಮಾಡಿದ ಅಪಮಾನ ಅದರಿಂದ ಅವರಿಗೆ ನಮ್ಮ ತಾಲೂಕಿಗೆ ಬರುವ ನೈತಿಕತೆ ಕಳೆದುಕೊಂಡಿದ್ದು ಅವರ ಆಗಮನಕ್ಕೆ ನಮ್ಮ ಹಾಗೂ ತಾಲೂಕಿನ ಜನತೆಯ ವಿರೋಧವಿದೆ..
ವಿರೋಧದ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಿದರೆ ನಾವು ಹೋರಾಟ ನಡೆಸುತ್ತೇವೆ… ”
ಮಹಾಬಲೇಶ್
ತೀರ್ಥಹಳ್ಳಿಯ ಎಪಿಎಂಸಿ ಮಾಜಿ ಅಧ್ಯಕ್ಷರು, ಪ್ರಗತಿಪರ ಚಿಂತಕರು
”ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿ ಆಗಮಿಸುತ್ತಿದ್ದು ಆ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಏನೆಲ್ಲಾ ಮಾಡಬೇಕೋ ಅದನ್ನ ಬಿಜೆಪಿ ಪಕ್ಷದವರು ಮಾಡುತ್ತಿದ್ದಾರೆ. ನಮ್ಮ ನಾಡಿನ ಮೇರು ಕವಿಯನ್ನು ಚಕ್ರತೀರ್ಥ ಅವಮಾನ ಮಾಡಿದ್ದಾರೆ. ಕುವೆಂಪು ಅವರ ಬಗ್ಗೆ ನಾವು ಶಾಲೆಗಳಿಂದಲೂ ಕೂಡ ಓದಿ ಅವರ ಬಗ್ಗೆ ಕೇಳಿ ಅದನ್ನು ನಾವೆಲ್ಲರೂ ಮೈಗೂಡಿಸಿಕೊಂಡಿದ್ದೇವೆ. ಈಗಲೂ ಸಮಯಾವಕಾಶ ಇದ್ದು ರಾಷ್ಟ್ರಕವಿಯನ್ನು ಅವಮಾನ ಮಾಡಿದಂತ ರೋಹಿತ್ ಚಕ್ರತೀರ್ಥರನ್ನು ಕರೆಸದಂತೆ ರಾಮೇಶ್ವರ ದೇವರು ಬಿಜೆಪಿಯವರಿಗೆ ಬುದ್ದಿ ನೀಡಲಿ…”
ಬಾಳೆಹಳ್ಳಿ ಪ್ರಭಾಕರ್
ಅಧ್ಯಕ್ಷರು ಒಕ್ಕಲಿಗರ ಸಂಘ
ತೀರ್ಥಹಳ್ಳಿ
”ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಕಾಲಿಡುವ ಅವಶ್ಯಕತೆಯೇ ಇಲ್ಲ. ಆತ ಬಂದರೆ ಬಿಜೆಪಿಯವರು ಕುವೆಂಪು ಅವರಿಗೆ ಮಾಡುವ ಅವಮಾನ..ದಾರಿಯಲ್ಲೇ ಅಡ್ಡಗಟ್ಟಿ ಮಸಿ ಬಳಿಯುತ್ತೇವೆ….”
ಪಡುವಳ್ಳಿ ಹರ್ಷೇಂದ್ರ
ಹಿಂದುಳಿದ ವರ್ಗದ ಯುವ ನಾಯಕರು ಪ್ರಗತಿಪರ ಚಿಂತಕರು