ಏಪ್ರಿಲ್ 5 ರಿಂದ ನಡೆಯುವ ಇತಿಹಾಸ ಪ್ರಸಿದ್ಧವಾದ ನಗರದ ಮಹಾಗಣಪತಿ ಜಾತ್ರೆ ವ್ಯಾಪಾರ ಮಳಿಗೆಗಳನ್ನು ಹಿಂದೂ ಸಮಾಜದ ವ್ಯಾಪಾರಿಗಳಿಗೆ ನೀಡುವಂತೆ ಒತ್ತಾಯಿಸಿ ಗುರುವಾರ ವಿಶ್ವಹಿಂದೂ ಪರಿಷತ್ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಾತ್ರೆಯಲ್ಲಿ ಮಹಾಗಣಪತಿ ರಸ್ತೆಯ ಇಕ್ಕೆಲಗಳಲ್ಲಿ ಹಣ್ಣುಕಾಯಿ, ಆಟಿಕೆ, ತಿಂಡಿತಿನಿಸು ಇತ್ಯಾದಿ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿ ತಮ್ಮ ಕಡೆಯಿಂದ ಹರಾಜು ಹಾಕಿ ಹೆಚ್ಚು ಹರಾಜು ಹಿಡಿದವರಿಗೆ ನೀಡಲಾಗುತ್ತಿದೆ. ದೇವಸ್ಥಾನವು ಮುಜರಾಯಿಗೆ ಸೇರಿದ್ದು, ಅನ್ಯಧರ್ಮಿಯರಿಗೆ ನೀಡಲು ಅವಕಾಶ ಇರುವುದಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಪ್ರಸ್ತುತ ಮುಸ್ಲೀಂರು ಈ ದೇಶದ ಕಾನೂನು ಸಂವಿಧಾನ ಮತ್ತು ಹಿಂದೂ ಸಂಸ್ಕೃತಿ, ಧಾರ್ಮಿಕ ಪದ್ಧತಿಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಧಾರ್ಮಿಕ ಪದ್ಧತಿಗಳ ವಿರೋಧಿಸುತ್ತಾ ಬಂದವರಿಗೆ ವ್ಯಾಪಾರ ಮಳಿಗೆ ನೀಡುವುದು ಸಮಂಜಸವಲ್ಲ. ಈಗಾಗಲೇ ದಕ್ಷಿಣ ಕನ್ನಡ, ಶಿರಸಿ, ಶಿವಮೊಗ್ಗದಲ್ಲಿ ಜಾತ್ರೆಗಳ ವ್ಯಾಪಾರ ವಹಿವಾಟುಗಳನ್ನು ಹಿಂದೂಯೇತರರಿಗೆ ನೀಡದಿರಲು ಆಡಳಿತ ಮಂಡಳಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ತಾವು ಮುಜರಾಯಿ ಕಾಯಿದೆ ಪ್ರಕಾರ ಹಿಂದುಯೇತರರಿಗೆ ಮುಜರಾಯಿ ದೇವಸ್ಥಾನಗಳ ಆಡಳಿತ, ವ್ಯಾಪಾರ ವಹಿವಾಟಿನಲ್ಲಿ ಅವಕಾಶ ನೀಡದಂತೆ ನಿಬಂಧ ವಿಧಿಸಬಹುದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಐ.ವಿ.ಹೆಗಡೆ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಕಾಮತ್, ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ರವೀಶ್, ಕಾರ್ಯದರ್ಶಿ ನಂದೀಶ್ ಸೂರಗುಪ್ಪೆ, ಸುದರ್ಶನ್ ಇನ್ನಿತರರು ಹಾಜರಿದ್ದರು.