ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ
Shivamogga Minister Madhu Bangarappa made a surprise visit to the new cardiology hospital at McGann Hospital and Ayanur Government School, reviewed facilities, patient care, shoes and socks quality, and assured action on a ₹6 crore equipment funding request.
ಶಿವಮೊಗ್ಗ, ಸೆ. 11: ಜಿಲ್ಲಾ ಪ್ರವಾಸದಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ನೂತನ ಹೃದ್ರೋಗ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಆಸ್ಪತ್ರೆಯ ಕಾರ್ಯವೈಖರಿ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಪರಿಶೀಲಿಸಿದರು.
ಕಸ್ತೂರಿ ರಂಗನ್ ವರದಿ ವಿರೋಧಿಸಿ ಶಿಕಾರಿಪುರದಲ್ಲಿ ಕಾಂಗ್ರೆಸ್ ಯುವ ಘಟಕ ಆಯೋಜಿಸಿದ್ದ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಯಾವುದೇ ಮುನ್ಸೂಚನೆ ನೀಡದೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಹೃದ್ರೋಗ ವಿಭಾಗದಲ್ಲಿರುವ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿದರು.
ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿರುವ ನಾಲ್ಕು ಮಾಡ್ಯುಲರ್ ಶಸ್ತ್ರಚಿಕಿತ್ಸಾ ಕೊಠಡಿಗಳು (Modular OT) ಹಾಗೂ ಕ್ಯಾಥ್‌ಲ್ಯಾಬ್ ಸೌಲಭ್ಯಗಳನ್ನು ಪರಿಶೀಲಿಸಿದ ಸಚಿವರು, ವೈದ್ಯಕೀಯ ಉಪಕರಣಗಳ ಗುಣಮಟ್ಟ ಮತ್ತು ಮೂಲಸೌಕರ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಹೃದ್ರೋಗ ವಿಭಾಗದ ಮುಖ್ಯಸ್ಥರು, ವಿಶೇಷ ಅಧಿಕಾರಿಗಳು ಹಾಗೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ವಿಭಾಗದ ಕಾರ್ಯನಿರ್ವಹಣೆ, ಚಿಕಿತ್ಸಾ ವ್ಯವಸ್ಥೆ ಮತ್ತು ಅಗತ್ಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ರೋಗಿಗಳಿಗೆ ತುರ್ತು ಚಿಕಿತ್ಸೆ ಸಕಾಲದಲ್ಲಿ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕೊರತೆಯ ಕುರಿತು ಮೆಡಿಕಲ್ ಡೀನ್ ಡಾ. ರಮೇಶ್ ಬಾಬು ಅವರು ಸಚಿವರ ಗಮನಕ್ಕೆ ತಂದರು. ನಾಲ್ಕು ಮಾಡ್ಯುಲರ್ ಓಟಿ ಕೊಠಡಿಗಳಿಗೆ ಅಗತ್ಯವಿರುವ ಬಾಕಿ ಯಂತ್ರೋಪಕರಣಗಳನ್ನು ಅಳವಡಿಸಲು ಸುಮಾರು ₹6 ಕೋಟಿ ಅನುದಾನ ಅಗತ್ಯವಿದೆ ಎಂದು ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಸಚಿವ ಮಧು ಬಂಗಾರಪ್ಪ ಅವರು ಈ ಕುರಿತು ಲಿಖಿತ ಮನವಿ ಸಲ್ಲಿಸುವಂತೆ ಸೂಚಿಸಿದರು. ಬಳಿಕ ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ, ಅಗತ್ಯ ಅನುದಾನವನ್ನು ಶೀಘ್ರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹೃದ್ರೋಗ ವಿಭಾಗಕ್ಕೆ ಚಿಕಿತ್ಸೆಗಾಗಿ ಹಾಗೂ ಹೊರರೋಗಿಗಳಾಗಿ ಆಗಮಿಸುವ ಸಾರ್ವಜನಿಕರಿಗೆ ತುರ್ತು ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಕಲ್ಪಿಸಬೇಕು. ರೋಗಿಗಳು ಸರತಿ ಸಾಲಿನಲ್ಲಿ ಅನಗತ್ಯವಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಸಚಿವರು ಸೂಚಿಸಿದರು. ಸಾರ್ವಜನಿಕರಿಂದ ಬಂದಿರುವ ದೂರುಗಳ ಬಗ್ಗೆಯೂ ಕೂಡಲೇ ಗಮನ ಹರಿಸುವಂತೆ ಆಸ್ಪತ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಚಿವರು ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಭೇಟಿಯಾಗಿ, ಅವರಿಗೆ ದೊರೆಯುತ್ತಿರುವ ಚಿಕಿತ್ಸೆಯ ಕುರಿತು ವಿಚಾರಿಸಿದರು. ಶೀಘ್ರ ಗುಣಮುಖರಾಗುವಂತೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮೆಡಿಕಲ್ ಡೀನ್ ಡಾ. ರಮೇಶ್ ಬಾಬು, ಹೃದ್ರೋಗ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷ ಅಧಿಕಾರಿ ಡಾ. ಪರಮೇಶ್ವರ, ಹೃದಯರೋಗ ತಜ್ಞ ಡಾ. ಮಹೇಶ್ ಮೂರ್ತಿ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಈಸೂರಿಗೆ ತೆರಳುವ ಮಾರ್ಗಮಧ್ಯೆ ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಆಯನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೂ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ ನೀಡಿ, ಶೈಕ್ಷಣಿಕ ಚಟುವಟಿಕೆಗಳು ಹಾಗೂ ಶಾಲೆಯಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.
ತರಗತಿಗಳಿಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಸರ್ಕಾರದಿಂದ ವಿತರಿಸಲಾಗಿರುವ ಶೂ ಮತ್ತು ಸಾಕ್ಸ್‌ಗಳು ಎಲ್ಲ ವಿದ್ಯಾರ್ಥಿಗಳಿಗೆ ದೊರೆತಿವೆಯೇ ಎಂದು ವಿಚಾರಿಸಿದರು. ವಿದ್ಯಾರ್ಥಿಗಳಿಗೆ ನೀಡಲಾಗಿರುವ ಶೂ-ಸಾಕ್ಸ್‌ಗಳ ಗುಣಮಟ್ಟವನ್ನೂ ಪರಿಶೀಲಿಸಿದರು.
ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟ ತೃಪ್ತಿಕರವಾಗಿದ್ದು, ಪೋಷಕರೂ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ವಿದ್ಯಾರ್ಥಿಗಳು ಸಚಿವರಿಗೆ ತಿಳಿಸಿದರು. ಶೂ-ಸಾಕ್ಸ್‌ಗಳ ಗುಣಮಟ್ಟದ ಕುರಿತು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಚಿವರು ವಿದ್ಯಾರ್ಥಿಗಳಿಂದಲೇ ಮಾಹಿತಿ ಪಡೆದರು.
ಈ ವೇಳೆ ವಿದ್ಯಾರ್ಥಿನಿಯೊಬ್ಬರು ಶಾಲೆಯ ಶೌಚಾಲಯ ವ್ಯವಸ್ಥೆ ಸರಿಪಡಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಕೂಡಲೇ ಶಾಲೆಯ ನೈರ್ಮಲ್ಯ, ಶೌಚಾಲಯ ವ್ಯವಸ್ಥೆ ಹಾಗೂ ಬಿಸಿಯೂಟದ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಾಲೆಯ ಮೇಲ್ಚಾವಣಿ ದುರಸ್ತಿ ಕಾಮಗಾರಿಯನ್ನು ವೀಕ್ಷಿಸಿ, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆಯೂ ನಿರ್ದೇಶನ ನೀಡಿದರು.
ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…
ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in…
ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…
ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…
ತುಂಗಾ ನದಿಗೆ ಹಾರಿದ 19 ವರ್ಷದ ಯುವತಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ 19-year-old woman jumps into Tunga River…
ಪೊಲೀಸರ ದಿಢೀರ್ ದಾಳಿ – ಅಕ್ರಮ ಕಸಾಯಿ ಖಾನೆಯಿಂದ ಮಾಂಸ ವಶಕ್ಕೆ , ಪ್ರಕರಣ ದಾಖಲು Police conduct a…