ಗುಡ್ಡ ಬಗೆದು ಇಲಿ ಹಿಡಿದ ಹೈಕಮಾಂಡ್: ನಾರಿಶಕ್ತಿಯ ಬೆನ್ನಿಗೆ ಚೂರಿ, ನಿಷ್ಠಾವಂತರಿಗೆ ಬರೀ ಕಪ್ಪೆಚಿಪ್ಪು!

ಗುಡ್ಡ ಬಗೆದು ಇಲಿ ಹಿಡಿದ ಹೈಕಮಾಂಡ್: ನಾರಿಶಕ್ತಿಯ ಬೆನ್ನಿಗೆ ಚೂರಿ, ನಿಷ್ಠಾವಂತರಿಗೆ ಬರೀ ಕಪ್ಪೆಚಿಪ್ಪು!

ಅಧಿಕಾರದ ದರ್ಪದಲ್ಲಿ ನೈತಿಕತೆಯೇ ಬಲಿ, ಸಿದ್ಧಾಂತಗಳ ಗೋರಿಯ ಮೇಲೆ ಸಚಿವ ಸಂಪುಟದ ಮೆರವಣಿಗೆ!

Writer Rafi Rippon Pete criticises the Karnataka Congress cabinet expansion, alleging neglect of loyal leaders, lack of women’s representation, and exclusion of MLA Beluru Gopalakrishna.

​ಕಾಂಗ್ರೆಸ್ ಹೈಕಮಾಂಡ್ ಎಂಬುದು ದೆಹಲಿಯಲ್ಲೆಲ್ಲೋ ಕುಳಿತು ನ್ಯಾಯ, ನೀತಿ, ಧರ್ಮವನ್ನು ಪಾಲಿಸುವ ಒಂದು ಪವಿತ್ರ ಪೀಠ ಎಂದು ನಂಬಿದ್ದ ಅಮಾಯಕ ಶಾಸಕರು ಮತ್ತು ಕಾರ್ಯಕರ್ತರಿಗೆ ಈಗ ಅಸಲಿ ಮುಖದ ದರ್ಶನವಾಗಿದೆ. ದೊಡ್ಡ ಗುಡ್ಡವನ್ನು ಬಗೆದು, ಬೆಟ್ಟದಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ ನಾಯಕರು, ಕಡೆಗೆ ಹಿಡಿದದ್ದು ಸತ್ತ ಇಲಿಯನ್ನು! ಹೌದು, ತನ್ನ ಆ ಹಳೇ ಕೊಳೆತ, ಅವಕಾಶವಾದಿ ಚಾಳಿಯನ್ನು ಕಾಂಗ್ರೆಸ್ ಮತ್ತೊಮ್ಮೆ ಅತ್ಯಂತ ನಿರ್ಲಜ್ಜವಾಗಿ ಮುಂದುವರಿಸಿದೆ. ಈ ಸಚಿವ ಸಂಪುಟ ವಿಸ್ತರಣೆ ಎಂಬುದು ಕೇವಲ ಒಂದು ರಾಜಕೀಯ ಪ್ರಕ್ರಿಯೆಯಾಗಿ ಉಳಿದಿಲ್ಲ, ಬದಲಾಗಿ ಪಕ್ಷದ ಮೂಲ ಅಸ್ತಿತ್ವಕ್ಕೆ, ತಳಮಟ್ಟದ ನಿಷ್ಠೆಗೆ ತಾವೇ ಖುದ್ದಾಗಿ ಕೊಡಲಿಪೆಟ್ಟು ಕೊಟ್ಟುಕೊಂಡ ನಡೆಯಾಗಿದೆ.

ಇಂದಿನ ಕಾಂಗ್ರೆಸ್‌ನಲ್ಲಿ ನಿಷ್ಠೆಗೆ ಕವಡೆ ಕಾಸಿನ ಬೆಲೆಯಿಲ್ಲ, ಶ್ರಮಕ್ಕೆ ಜಾಗವಿಲ್ಲ. ನೀವು ಮಂತ್ರಿಯಾಗಬೇಕೇ? ಹಾಗಿದ್ದರೆ ನೀವು ಮಾಜಿ ಮುಖ್ಯಮಂತ್ರಿಗಳ ಪುತ್ರರಾಗಿರಬೇಕು! ಜಾತಿಯ ಬಲವಿರಬೇಕು, ಅದಕ್ಕಿಂತ ಹೆಚ್ಚಾಗಿ ಕೋಟಿ ಕೋಟಿ ಸುರಿಯುವ ಸಂಪತ್ತಿನ, ಕಪ್ಪುಹಣದ ಬಲವಿರಬೇಕು! ಅಹಿಂದ, ದೀನದಲಿತರ ಉದ್ಧಾರ ಎಂದು ವೇದಿಕೆಗಳ ಮೇಲೆ ರಕ್ತ ಕುದಿಯುವಂತೆ ಭಾಷಣ ಬಿಗಿಯುವ ನಾಯಕರಿಗೆ, ಅಧಿಕಾರ ಹಂಚುವಾಗ ಮಾತ್ರ ಕುಬೇರರು, ಜಾತಿ ಪ್ರಬಲರು ಮತ್ತು ಬ್ಲಾಕ್‌ಮೈಲ್ ಮಾಡುವವರೇ ಬೇಕು. ಹಗಲಿರುಳು ಬಿಸಿಲು-ಮಳೆ ಎನ್ನದೆ, ಲಾಠಿ ಏಟು ತಿಂದು ಪಕ್ಷದ ಬಾವುಟ ಹೊತ್ತು ತಿರುಗಿದ ನೈಜ ಕಾರ್ಯಕರ್ತನಿಗೆ ದಕ್ಕಿದ್ದು ಕೇವಲ ‘ಕಪ್ಪೆಚಿಪ್ಪು’. ಪಕ್ಷ ಸಂಘಟನೆಗಿಂತ, ತಮ್ಮದೇ ಆದ ಒಂದು ಗುಂಪು ಕಟ್ಟಿಕೊಂಡು ನಾಯಕರನ್ನೇ ಬೆದರಿಸುವ ಶಾಸಕರಿಗೆ ಇಲ್ಲಿ ರೆಡ್ ಕಾರ್ಪೆಟ್ ಸ್ವಾಗತ. ಇದು ಪ್ರಜಾಪ್ರಭುತ್ವದ ಅಣಕವಲ್ಲದೆ ಮತ್ತೇನು?

ಮಹಿಳಾ ಮಂತ್ರಿಗಳೆಲ್ಲಿ? 2 ಸಾವಿರ ಕೊಟ್ಟು ಮಾತೃಸ್ವರೂಪಿಯರ ಬಾಯಿ ಮುಚ್ಚಿಸಿದ್ರಾ?

ಇನ್ನು ಮಹಿಳೆಯರ ಬಗ್ಗೆ ಮಾತನಾಡುವುದೇ ಒಂದು ದೊಡ್ಡ ದುರಂತ. ‘ನಾನು ಹೆಣ್ಣು, ನಾನು ಹೋರಾಡಬಲ್ಲೆ’ ಎಂದು ಉತ್ತರ ಭಾರತದಲ್ಲಿ ಗಂಟಲು ಹರಿದುಕೊಳ್ಳುವ ರಾಷ್ಟ್ರೀಯ ನಾಯಕರಿಗೆ, ಇಡೀ ಕರ್ನಾಟಕ ರಾಜ್ಯದಲ್ಲಿ ಮಂತ್ರಿ ಮಾಡಲು ಒಬ್ಬೇ ಒಬ್ಬ ಮಹಿಳಾ ಶಾಸಕಿ ಕಣ್ಣಿಗೆ ಕಾಣಿಸಲಿಲ್ಲವೇ? ಅಷ್ಟೊಂದು ದೃಷ್ಟಿದೋಷವೇ ಈ ಹೈಕಮಾಂಡ್‌ಗೆ? ಸಂಪುಟದಲ್ಲಿ ಮಹಿಳೆಯರಿಗೇ ಸ್ಥಾನವಿಲ್ಲ ಎಂದರೆ, ಇದು ಸಮಸ್ತ ನಾರಿಶಕ್ತಿಗೆ ಮಾಡಿದ ಘೋರ ಅಪಮಾನವಲ್ಲವೇ? ಬಹುಶಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನೂ ಯಾವುದಾದರೂ ಮೀಸೆ ಹೊತ್ತ ‘ಗಂಡುಬೀರಿ’ ನಾಯಕನಿಗೆ ಕೊಟ್ಟು ಕೈತೊಳೆದುಕೊಳ್ಳುತ್ತಾರೇನೋ! ಮಹಿಳೆಯರು ಈ ಅನ್ಯಾಯದ ವಿರುದ್ಧ ದನಿ ಎತ್ತಬಾರದು, ಪ್ರಶ್ನೆ ಮಾಡಬಾರದು ಎಂದೇ ‘ಗೃಹಲಕ್ಷ್ಮಿ’ ಯೋಜನೆಯಡಿ ೨ ಸಾವಿರ ರೂಪಾಯಿ ನೀಡಿ ಅವರ ಬಾಯಿ ಮುಚ್ಚಿಸುವ ಷಡ್ಯಂತ್ರ ಮಾಡಿದ್ದಾರಾ? ಅಧಿಕಾರದ ಮದದಲ್ಲಿ ಹೆಣ್ಣಿನ ಸ್ವಾಭಿಮಾನವನ್ನು ಕೇವಲ ಎರಡು ಸಾವಿರಕ್ಕೆ ತೂಗಿದರೇ?

‘ಕಾಂಗ್ರೆಸ್ ಹೈಕಮಾಂಡ್ ಪಟ್ಟಿ ಅಂದರೆ ಅದೇ ವೇದವಾಕ್ಯ, ಅದೇ ಫೈನಲ್’ ಎಂದು ಬಿಂಬಿಸಿಕೊಳ್ಳುತ್ತಿದ್ದರಲ್ಲ, ಆ ಬಲಿಷ್ಠ ಹೈಕಮಾಂಡ್‌ನ ಬಂಡವಾಳ ಈಗ ಬಯಲಾಗಿದೆ. ಬೆಳಿಗ್ಗೆ ಬಂದ ಪಟ್ಟಿಯಲ್ಲಿದ್ದ ಉತ್ತರ ಕನ್ನಡದ ಪ್ರಬಲ ನಾಯಕ ಮಂಕಾಳ್ ವೈದ್ಯ ಅವರ ಹೆಸರನ್ನು ಸಂಜೆ ಹೊತ್ತಿಗೆ ಕಿತ್ತುಹಾಕಿದ್ದೇಕೆ? ದಾವಣಗೆರೆಯ ಆ ‘ರಾಜಾ ಮಹಾಶಯ’ರ ಇಡೀ ಕುಟುಂಬವೇ ಅಧಿಕಾರದಲ್ಲಿರಬೇಕು ಎಂಬ ದರ್ಪದ ಹಠಕ್ಕೆ ಈ ದಿಲ್ಲಿಯ ಹೈಕಮಾಂಡ್ ಬೆಚ್ಚಿಬಿದ್ದಿತೇ? ಹೆದರಿ ಗಡಗಡ ನಡುಗಿತೇ? ಈ ಸಂಪುಟದ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಒಂದು ಕಾಲದ ಅಜೇಯ, ಪ್ರಬಲ ‘ಡಿಕೆ ಸಾಮ್ರಾಜ್ಯ’ ಇಂದು ಸಿದ್ದು ಬಣದ ಮುಂದೆ ಸಂಪೂರ್ಣವಾಗಿ ಮಂಡಿಯೂರಿದಂತೆ, ಶಸ್ತ್ರತ್ಯಾಗ ಮಾಡಿದಂತೆ ಭಾಸವಾಗುತ್ತಿದೆ.

ಬೇಳೂರು ಸಾಹೇಬ್ರೇ, ನಿಮಗಿನ್ನೂ ರಾಜಕೀಯ ಅರ್ಥವಾಗಿಲ್ಲ ಬಿಡಿ!

ಇನ್ನು, ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಕಥೆ ಕೇಳಿದರೆ ಬೇಸರವೆನಿಸದೇ ಇರದು ಪಾಪ, ಈ ಬಾರಿಯೂ ಆ ಮನುಷ್ಯನಿಗೆ ಭಾರೀ ನಿರಾಸೆ.ಅವರಿಗೆ ಮಂತ್ರಿ ಸ್ಥಾನ ತಪ್ಪಿರುವುದು ಅವರ ಅಭಿಮಾನಿಗಳಿಗಷ್ಟೇ ಅಲ್ಲದೇ ಅವರ ವಿರೋಧಿಗಳಿಗೂ ಬೇಸರ ತರಿಸಿದೆ. ಅವರು ತಾನೇ ಏನು ಮಾಡಲು ಸಾಧ್ಯ? ಅವರ ಬಳಿ ಹೈಕಮಾಂಡ್ ಅನ್ನು ಖರೀದಿಸುವ ಹಣದ ಬಲವಿಲ್ಲ! ಅವರ ಪರವಾಗಿ ಲಾಬಿ ಮಾಡಲು ಚಿತ್ರನಟರ ದಂಡಿಲ್ಲ! ‘ನಮ್ಮಲ್ಲಿ ಗುಟುಕು ನೀರಿಲ್ಲದಿದ್ದರೂ, ನಮಗೆ ನೀರು ಬಿಡಿ’ ಎಂದು ಕತ್ತು ಹಿಡಿದು ಹಠ ಮಾಡುವ ಪಕ್ಕದ ರಾಜ್ಯದ ಮುಖ್ಯಮಂತ್ರಿಯ ಒತ್ತಡವೂ ಅವರಿಗಿಲ್ಲ. ಅವರ ಬಳಿ ಇರುವುದು ಕೇವಲ ಅವರು ಪ್ರೀತಿಸುವ ಮುಗ್ಧ ಜನರು, ಹಾಗೂ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಜನಸಾಮಾನ್ಯರು ಮಾತ್ರ.

ಬೇಳೂರು ಸಾಹೇಬರೇ, ನಿಮಗಿನ್ನೂ ಈ ಕೊಳಕು ರಾಜಕೀಯದ ಚದುರಂಗದಾಟ ಅರ್ಥವಾಗಿಲ್ಲ ಬಿಡಿ. ನಿಷ್ಠೆಯಿಂದ ಇದ್ದು, ಪದೇ ಪದೇ ಬೆನ್ನಿಗೆ ಚೂರಿ ಹಾಕಿಸಿಕೊಳ್ಳುವುದು, ನಂಬಿ ಮೋಸ ಹೋಗುವುದು ನಿಮಗೂ ಈಗ ಒಗ್ಗಿಕೊಂಡಂತಿದೆ! ಕಣ್ಣೀರು ಹಾಕುವುದಷ್ಟೇ ನಿಮ್ಮಂತಹ ನಿಷ್ಠಾವಂತರ ಹಣೆಬರಹ! ಜನಪರ ಕಾಳಜಿಗಿಂತ, ಜಾತಿ-ಹಣದ ಲೆಕ್ಕಾಚಾರವೇ ಮೇಲಾದಾಗ ನಿಮ್ಮಂತಹ ಜನನಾಯಕರಿಗೆ ಇಲ್ಲಿ ಜಾಗವಿಲ್ಲ.

– ರಫಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ

ಜಿಂಕೆ ಮಾಂಸ ಸಾಗಾಟದ ಆರೋಪ: 34 ಕೆ.ಜಿ.ಗೂ ಅಧಿಕ ಮಾಂಸ ವಶ, ಓರ್ವ ಬಂಧನ Forest mobile squad seizes…

22 hours ago

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ

ಸರ್ಕಾರಿ ಬಸ್ ಸಮಯ ಬದಲಾವಣೆಗೆ ಆಗ್ರಹ: ವಿದ್ಯಾರ್ಥಿಗಳು, ಉದ್ಯೋಗಿಗಳ ಪ್ರತಿಭಟನೆ Students and employees protest in Thirthahalli demanding…

2 days ago

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ

ಮೆಗ್ಗಾನ್ ನೂತನ ಹೃದ್ರೋಗ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ; ₹6 ಕೋಟಿ ಅನುದಾನದ ಭರವಸೆ Shivamogga Minister…

2 days ago

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು

ದಸರಾ ಕ್ರೀಡಾಕೂಟದ ಕರಾಟೆಯಲ್ಲಿ ರಿಪ್ಪನ್‌ಪೇಟೆಯ ನಿಯಾಜ್ ನಾಸಿರ್‌ಗೆ ಚಿನ್ನದ ಗೆಲುವು Ripponpete’s Niyaz Nasir wins first place in…

2 days ago

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !?

ಹೆದ್ದಾರಿಪುರದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ : ಕಾಸು ತಿಂದು ಮೌನಕ್ಕೆ ಜಾರಿತೇ ಅಬಕಾರಿ ಇಲಾಖೆ !? Illegal liquor…

2 days ago

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು

ಕೋಡೂರು ಶಾಲೆಯಲ್ಲಿ ಸಂಭ್ರಮದ ಕೃಷ್ಣ-ರಾಧಾ ವೇಷ ಸ್ಪರ್ಧೆ: ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದುಕೃಷ್ಣರು Krishna-Radha fancy dress competition at Koduru…

2 days ago