ಲೆಗ್ ಸ್ಪಿನ್ ಜಾದೂ, ಬ್ಯಾಟಿಂಗ್ ಖದರ್ : ರಾಜ್ಯಮಟ್ಟದಲ್ಲಿ ಮಿಂಚಲು ಸಜ್ಜಾದ ಕೋಣಂದೂರಿನ ಯುವತಿ!
Discover the inspiring journey of Aadya S Mane from Konandur, selected as an all-rounder for the Gulbarga Mystics in the Karnataka Maharani Cricket Cup 2026.
ಕನಸು ಕಾಣಲು ಯಾವ ಮಿತಿಯೂ ಇಲ್ಲ; ಆ ಕನಸನ್ನು ಬೆನ್ನಟ್ಟಿ ಸಾಧಿಸುವ ಛಲ ಮತ್ತು ಕಠಿಣ ಪರಿಶ್ರಮವಿದ್ದರೆ ಯಶಸ್ಸು ತನ್ನಿಂದ ತಾನೇ ಒಲಿಯುತ್ತದೆ. ಈ ಸ್ಫೂರ್ತಿದಾಯಕ ಮಾತಿಗೆ ಜೀವಂತ ಉದಾಹರಣೆಯಾಗಿ ಹೊರಹೊಮ್ಮಿದ್ದಾರೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಯುವ ಕ್ರಿಕೆಟ್ ಪ್ರತಿಭೆ ಆದ್ಯ ಎಸ್.ಮಾನೆ.
ಗ್ರಾಮೀಣ ಹಿನ್ನೆಲೆಯಿಂದ ಬಂದು ರಾಜ್ಯ ಮಟ್ಟದಲ್ಲಿ ಮಿಂಚುತ್ತಿರುವ ಈ ಯುವ ಆಟಗಾರ್ತಿ, ಇದೀಗ ಪ್ರತಿಷ್ಠಿತ ಕರ್ನಾಟಕ ರಾಜ್ಯ ಮಹಾರಾಣಿ ಕ್ರಿಕೆಟ್ ಕಪ್ – 2026 ಟೂರ್ನಿಗೆ ಆಯ್ಕೆಯಾಗುವ ಮೂಲಕ ರಾಜ್ಯದ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಹಿಳಾ ಕ್ರಿಕೆಟ್ ಕಪ್ 2026ರ ಹರಾಜು ಪ್ರಕ್ರಿಯೆಯಲ್ಲಿ ಆದ್ಯ ಅವರ ಕ್ರೀಡಾ ನೈಪುಣ್ಯತೆಯನ್ನು ಗುರುತಿಸಿ ‘ಗುಲ್ಬರ್ಗ ಮಿಸ್ಟಿಕ್ಸ್’ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಆದ್ಯ ಓರ್ವ ಅದ್ಭುತ ಆಲ್ ರೌಂಡರ್. ಅತ್ಯುತ್ತಮ ಲೆಗ್ ಸ್ಪಿನ್ನರ್ ಹಾಗೂ ಭರವಸೆಯ ಬ್ಯಾಟರ್ ಆಗಿ ಮೈದಾನದಲ್ಲಿ ತಮ್ಮದೇ ಛಾಪು ಮೂಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಎಂ.ಸಿ.ಸಿ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಆದ್ಯ, ಓದಿನ ಜೊತೆಗೆ ಕ್ರೀಡೆಯನ್ನೂ ಸಮಾನವಾಗಿ ಸರಿದೂಗಿಸಿಕೊಂಡು ಹೋಗುತ್ತಿರುವುದು ಯುವ ಸಮುದಾಯಕ್ಕೆ ನಿಜಕ್ಕೂ ಮಾದರಿಯಾಗಿದೆ.
ಯಾವುದೇ ಸಾಧನೆಗೆ ಕುಟುಂಬದ ಪ್ರೋತ್ಸಾಹ ಅತ್ಯಗತ್ಯ. ಕೋಣಂದೂರಿನ ಅಂಕನಕುಡಿಗೆ ವಾಸಿ, ಹೆಸರಾಂತ ಕ್ರೀಡಾಪಟುಗಳಾದ ಕಾರ್ಗಲ್ ಗೋಪಾಲ್ ರಾವ್ ಮತ್ತು ಜಯಾ ಜಿ. ರಾವ್ ಅವರ ಮೊಮ್ಮಗಳಾದ ಆದ್ಯಳಿಗೆ ಕ್ರೀಡೆ ರಕ್ತಗತವಾಗಿಯೇ ಬಂದಿದೆ. ಪ್ರಸ್ತುತ ಬೆಂಗಳೂರು ನಿವಾಸಿಗಳಾದ ಪೋಷಕರು, ರಮ್ಯ ಮತ್ತು ಸುಧೀರ್ ರಾವ್ ದಂಪತಿಗಳ ನಿರಂತರ ಬೆಂಬಲ ಹಾಗೂ ಪ್ರೋತ್ಸಾಹ ಈಕೆಯ ಈ ಸಾಧನೆಗೆ ದಾರಿದೀಪವಾಗಿದೆ.
ಗ್ರಾಮೀಣ ಬೇರುಗಳಿಂದ ಮೇಲಕ್ಕೆದ್ದು, ಉನ್ನತ ಮಟ್ಟದ ಕ್ರೀಡಾ ವೇದಿಕೆಯಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಆದ್ಯಳ ಈ ಪಯಣ ಸಾವಿರಾರು ಯುವ ಕ್ರೀಡಾಪಟುಗಳಿಗೆ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ದೊಡ್ಡ ಸ್ಫೂರ್ತಿಯಾಗಿದೆ. ಶ್ರದ್ಧೆ ಮತ್ತು ಗುರಿಯೆಡೆಗಿನ ಏಕಾಗ್ರತೆ ಇದ್ದರೆ ಎಂತಹ ಮೈಲಿಗಲ್ಲನ್ನಾದರೂ ತಲುಪಬಹುದು ಎಂಬುದನ್ನು ಈಕೆ ಸಾಬೀತುಪಡಿಸಿದ್ದಾರೆ.
ಮುಂಬರುವ ಟೂರ್ನಿಯಲ್ಲಿ ಆದ್ಯ ಅದ್ಭುತ ಪ್ರದರ್ಶನ ನೀಡಿ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಈಕೆಯ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಬೆಳಗಲಿ ಎಂದು ಕ್ರೀಡಾಭಿಮಾನಿಗಳು ತುಂಬು ಹೃದಯದಿಂದ ಹಾರೈಸುತ್ತಿದ್ದಾರೆ. ಸಾಧನೆಯ ಶಿಖರವೇರಲಿ ಈ ನಮ್ಮೂರಿನ ಕುವರಿ!




