Headlines

ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ : ಪೊಲೀಸರೊಂದಿಗೆ ವಾಗ್ವಾದ , ಇಬ್ಬರು ವಶಕ್ಕೆ.!

ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ : ಪೊಲೀಸರೊಂದಿಗೆ ವಾಗ್ವಾದ , ಇಬ್ಬರು ವಶಕ್ಕೆ.!

Tension erupted in Shivamogga as BJP workers attempted to storm the Congress office during a protest. Police intervened, detained protesters, and tightened security in the area.

ಶಿವಮೊಗ್ಗ: ನಗರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದ ಪರಿಣಾಮ ಕೆಲಕಾಲ ತೀವ್ರ ವಾಗ್ವಾದ ನಡೆಯಿತು.

ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿದ್ದ ಬ್ಯಾನರ್‌ಗಳನ್ನು ಹರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕಚೇರಿಯೊಳಗೆ ಪ್ರವೇಶಿಸಲು ಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ತಡೆದರು.

ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಕೆಲ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆಯಿತು. ವಶಕ್ಕೆ ಪಡೆಯುವ ಸಂದರ್ಭದಲ್ಲಿ ಓರ್ವ ಕಾರ್ಯಕರ್ತ ಪೊಲೀಸ್ ವಾಹನ ಏರಲು ನಿರಾಕರಿಸಿದ ಕಾರಣ ಪೊಲೀಸರು ಆತನನ್ನು ಬಲವಂತವಾಗಿ ವಾಹನಕ್ಕೆ ಕೂರಿಸಿ ಸ್ಥಳದಿಂದ ಕರೆದೊಯ್ದರು.

ಇದೇ ವೇಳೆ ಪ್ರತಿಭಟನೆಯ ಸಂದರ್ಭ ಒಬ್ಬ ಕಾರ್ಯಕರ್ತ ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದು ಬಂದಿರುವುದು ಕಂಡುಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಆತನನ್ನೂ ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು.

ಘಟನೆಯ ಬಳಿಕ ಕಾಂಗ್ರೆಸ್ ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಕೆಲಕಾಲ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

About The Author

Exit mobile version