ಶರಾವತಿ ಸಂತ್ರಸ್ತರ ದಶಕಗಳ ಕನಸಿನ ಹಸಿರುಮಕ್ಕಿ ಸೇತುವೆ ಭಾಗಶಃ ಸಿದ್ಧ : ಬೇಳೂರು ‘ಸಚಿವರಾಗಿ’ ಬಂದು ಉದ್ಘಾಟಿಸಲಿ ಎಂಬುದು ಜನರ ಹೆಬ್ಬಯಕೆ!

ಶರಾವತಿ ಸಂತ್ರಸ್ತರ ದಶಕಗಳ ಕನಸಿನ ‘ಹಸಿರುಮಕ್ಕಿ ಸೇತುವೆ’ ಸಿದ್ಧ: ಬೇಳೂರು ‘ಸಚಿವರಾಗಿ’ ಬಂದು ಉದ್ಘಾಟಿಸಲಿ ಎಂಬುದು ಜನರ ಹೆಬ್ಬಯಕೆ!

Hasirumakki Bridge, a decades-long dream of Sharavathi reservoir-displaced families in Shivamogga district, is nearing completion. Local residents hope MLA Beluru Gopalakrishna will inaugurate the bridge as a minister, bringing a new era of connectivity to Nittur, Sampekatte and surrounding villages.

ಮಲೆನಾಡಿನ ಜೀವನಾಡಿ ಶರಾವತಿ ನದಿಯ ಹಿನ್ನೀರಿನಲ್ಲಿ ಮುಳುಗಡೆಯಾಗಿ, ದಶಕಗಳ ಕಾಲ ದ್ವೀಪದಂತಾಗಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು , ಸಂಪೆಕಟ್ಟೆ , ಎಸ್ ಎಸ್ ಬೋಗ್ ಗ್ರಾಮ ಪಂಚಾಯತ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಬಹುದೊಡ್ಡ ಕನಸೊಂದು ಕೊನೆಗೂ ನನಸಾಗುವ ಕಾಲ ಕೂಡಿಬಂದಿದೆ. ಸಂಜೆ ಕವಿಯುತ್ತಿದ್ದಂತೆ ಲಾಂಚ್ ಸೇವೆ ಸ್ಥಗಿತಗೊಂಡು, ತುರ್ತು ಪರಿಸ್ಥಿತಿಯಲ್ಲೂ ಮರುದಿನ ಬೆಳಗಾಗುವವರೆಗೆ ಕಾಯಬೇಕಿದ್ದ ಆ ಭಾಗದ ಜನರ ಸಂಕಟಕ್ಕೆ ಮುಕ್ತಿ ನೀಡಲು ಹಸಿರುಮಕ್ಕಿ ಸೇತುವೆ ಉದ್ಘಾಟನೆಗೆ ಸಜ್ಜಾಗುತ್ತಿದೆ. ದಶಕಗಳ ಕಾಲ ಕತ್ತಲಲ್ಲಿದ್ದ ಶರಾವತಿ ಮುಳುಗಡೆ ಸಂತ್ರಸ್ತರ ಬಾಳಲ್ಲಿ ಈ ಸೇತುವೆ ಹೊಸ ಬೆಳಕು ಮೂಡಿಸುತ್ತಿದೆ. ಈ ಬೃಹತ್ ಕಾಮಗಾರಿ ಈಗ ಅಂತಿಮ ಘಟ್ಟ ತಲುಪಿದ್ದು, ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ.

ಸಚಿವರಾಗಿ ಬರಲಿ ಬೇಳೂರು: ಮೊಳಗಿದ ಜನರ ಒಕ್ಕೊರಲಿನ ಕೂಗು!

ಇದರ ಬೆನ್ನಲ್ಲೇ, ದಶಕಗಳ ಕನಸು ನನಸಾಗುತ್ತಿರುವ ಸಂಭ್ರಮದಲ್ಲಿರುವ ಸ್ಥಳೀಯರ ಒಂದು ಪ್ರಮುಖ ಒತ್ತಾಸೆ ಮುನ್ನೆಲೆಗೆ ಬಂದಿದೆ. ಅದೆಂದರೆ, ತಮ್ಮ ನೆಚ್ಚಿನ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಕೇವಲ ಶಾಸಕರಾಗಿ ಮಾತ್ರವಲ್ಲದೆ, ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ಸಚಿವರಾಗಿ ಬಂದು ಈ ಸೇತುವೆಯನ್ನು ಉದ್ಘಾಟಿಸಬೇಕು ಎಂಬುದು ಆ ಭಾಗದ ಸಮಸ್ತ ಜನರ ಹೆಬ್ಬಯಕೆಯಾಗಿದೆ.

​ಇದೇ ಸಂಭ್ರಮದ ಹಾಗೂ ನಿರೀಕ್ಷೆಯ ವಾತಾವರಣದ ನಡುವೆ, ಇಂದು ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಘಟಕದ ಮುಖಂಡರು ಹಾಗೂ ಗ್ರಾಮಸ್ಥರು ಒಟ್ಟಾಗಿ ಹಸಿರುಮಕ್ಕಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು. ಸೇತುವೆಯ ಬಳಿ ನಡೆಯುತ್ತಿರುವ ಅಂತಿಮ ಹಂತದ ಕಾಮಗಾರಿಯನ್ನು ಖುದ್ದಾಗಿ ವೀಕ್ಷಿಸಿದ ಅವರು, ಕೆಲಸದ ವೇಗ ಹಾಗೂ ಗುಣಮಟ್ಟವನ್ನು ಕಂಡು ಅತೀವ ಹರ್ಷ ವ್ಯಕ್ತಪಡಿಸಿದರು. ಹಲವು ದಶಕಗಳಿಂದ ಕೇವಲ ಭರವಸೆಯಾಗಿಯೇ ಉಳಿದಿದ್ದ ಸೇತುವೆ ಇಂದು ಕಣ್ಣೆದುರೇ ಬೃಹದಾಕಾರವಾಗಿ ತಲೆಎತ್ತಿ ನಿಂತಿರುವುದನ್ನು ನೋಡಿದ ಗ್ರಾಮಸ್ಥರ ಕಣ್ಣಲ್ಲಿ ಸಾರ್ಥಕತೆಯ ಆನಂದ ಎದ್ದುಕಾಣುತ್ತಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರ ಜೋಗಿ ಅವರು, ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿಶೇಷ ಕಾಳಜಿ ಹಾಗೂ ನಿರಂತರ ಪ್ರಯತ್ನದಿಂದಾಗಿ ನೆನೆಗುದಿಗೆ ಬಿದ್ದಿದ್ದ ಸೇತುವೆ ಕಾಮಗಾರಿ ಇಂದು ಮುಕ್ತಾಯದ ಹಂತಕ್ಕೆ ಬಂದಿದೆ. ಈ ಭಾಗದ ಜನರ ಬಹು ನಿರೀಕ್ಷೆಯ ಸೇತುವೆ ಅತೀ ಶೀಘ್ರದಲ್ಲಿಯೇ ಲೋಕಾರ್ಪಣೆಯಾಗಲಿದ್ದು, ಇದನ್ನು ನಮ್ಮ ನೆಚ್ಚಿನ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಚಿವರಾಗಿ ಉದ್ಘಾಟಿಸುವ ನಿರೀಕ್ಷೆ ಇದೆ ಎಂದು ಸ್ಥಳೀಯರ ಪರವಾಗಿ ಒಕ್ಕೊರಲಿನ ಆಗ್ರಹ ವ್ಯಕ್ತಪಡಿಸಿದರು.

ಕಾಗೋಡು ತಿಮ್ಮಪ್ಪನವರ ಇಚ್ಛಾಶಕ್ತಿ, ಬೇಳೂರು ವೇಗ

ಶರಾವತಿ ಹಿನ್ನೀರಿನಲ್ಲಿ ಸಿಗಂದೂರು ಸೇತುವೆ ನಿರ್ಮಾಣಕ್ಕೂ ಮೊದಲು ಶಂಕುಸ್ಥಾಪನೆಗೊಂಡಿದ್ದ ಸಾಗರ ಹಾಗೂ ಹೊಸನಗರ ಭಾಗಕ್ಕೆ ಸಂಪರ್ಕ ಕಲ್ಪಿಸುವ ಹಸಿರುಮಕ್ಕಿ ಸೇತುವೆ ಕಾಮಗಾರಿಯ ಪ್ರಗತಿ ಈಗ ವೇಗಗೊಂಡಿದೆ. ಎರಡು ಸಾವಿರದ ಹದಿನೇಳರಲ್ಲಿ ಅಂದಿನ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮಲೆನಾಡಿನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪನವರ ಇಚ್ಛಾಶಕ್ತಿಯ ಫಲವಾಗಿ ಈ ಸೇತುವೆಗೆ ಅಡಿಗಲ್ಲು ಹಾಕಲಾಯಿತು. ಅಂದು ಈ ಸೇತುವೆಗೆ ನೂರಾ ಇಪ್ಪತ್ತೈದು ಕೋಟಿಗೂ ಅಧಿಕ ವೆಚ್ಚದ ಅಂದಾಜಿನಲ್ಲಿ ನಿರ್ಮಾಣ ಪ್ರಾರಂಭವಾಗಿತ್ತು. ಇದು ಒಂದು ಕಿಲೋ ಮೀಟರ್‌ಗೂ ಹೆಚ್ಚು ಉದ್ದದ ಸೇತುವೆಯಾಗಿದ್ದು, ಎಂಟು ವರೆ ಮೀಟರ್ ಅಗಲದ ದ್ವಿಪಥ ರಸ್ತೆಯನ್ನು ಹೊಂದಿದೆ. ಭದ್ರತೆಗಾಗಿ ಮೂವತ್ತನಾಲ್ಕು ಬೃಹತ್ ಪಿಲ್ಲರ್‌ಗಳನ್ನು ಹಾಕಲಾಗಿದ್ದು, ಈಗಾಗಲೇ ಕಾಮಗಾರಿ ಶೇಕಡಾ ಎಂಬತ್ತರಷ್ಟು ಮುಕ್ತಾಯವಾಗಿದೆ. ಈ ಸೇತುವೆಯು ಸಾಗರ ಭಾಗದಿಂದ ಹೊಸನಗರದ ಮೂಲಕ ಕೊಲ್ಲೂರು ಹಾಗೂ ಕುಂದಾಪುರ ಭಾಗಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ.

ಈ ಬಗ್ಗೆ ಮಾತನಾಡಿದ ಮುಖಂಡರಾದ ಸುರೇಶ್ ಕೂಡ್ಲುಕೊಪ್ಪ ಅವರು, ಸೇತುವೆ ನಿರ್ಮಾಣದ ಹಿಂದೆ ಕಾಗೋಡು ತಿಮ್ಮಪ್ಪನವರ ಪರಿಶ್ರಮ ಇದೆ ಎಂಬುದನ್ನು ಸ್ಮರಿಸಿದರು. ಈ ಸೇತುವೆ ಕಾಮಗಾರಿ ಸ್ಥಗಿತವಾಗಿದ್ದಾಗ ನಮಗೆಲ್ಲಾ ಆತಂಕ ಉಂಟಾಗಿತ್ತು, ಈಗ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಆಸಕ್ತಿಯಿಂದ ಕಾಮಗಾರಿ ಚುರುಕಾಗಿ ನಡೆದು ಅಂತಿಮ ಹಂತಕ್ಕೆ ಬಂದಿದೆ. ಈ ಭಾಗಕ್ಕೆ ಲಾಂಚ್ ವ್ಯವಸ್ಥೆ ಇದ್ದರೂ ಸಹ ಸಂಜೆ ಮೇಲೆ ಓಡಾಟ ಸ್ಥಗಿತವಾಗುತ್ತಿತ್ತು. ಆ ಭಾಗದ ಜನ ಸಾಗರಕ್ಕೆ ಬರಬೇಕು ಅಂದರೆ ಮತ್ತೆ ಬೆಳಗ್ಗೆ ತನಕ ಕಾಯಬೇಕಿತ್ತು, ಇನ್ನು ಈ ಭಾಗದ ಜನ ಸಾಗರ ಭಾಗಕ್ಕೆ ಹೋಗಬೇಕಾಗಿದ್ದರೆ ಹಲವು ಕಿಲೋಮೀಟರ್ ದೂರ ಸಾಗಬೇಕಿತ್ತು. ಸೇತುವೆ ನಿರ್ಮಾಣದಿಂದ ನಮಗೆ ದೂರದ ಪಯಾಣ ಸನಿಹವಾಗಲಿದೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.

ಸದ್ಯದಲ್ಲೇ ದ್ವಿಚಕ್ರ ಹಾಗೂ ಲಘು ವಾಹನಗಳ ಸಂಚಾರಕ್ಕೆ ಮುಕ್ತ?



ಪ್ರಸ್ತುತ ದಿನಗಳಲ್ಲಿ ಮಳೆಯ ಕೊರತೆಯಿಂದ ನೀರು ಕಡಿಮೆಯಾಗಿರುವುದರಿಂದ ಲಾಂಚ್ ಸೇವೆಯನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಈ ವಾಸ್ತವಿಕ ತೊಂದರೆಯನ್ನು ಅರಿತು, ಅಧಿಕೃತ ಲೋಕಾರ್ಪಣೆಗೂ ಮುಂಚಿತವಾಗಿ ಸೇತುವೆಯ ಮೇಲೆ ಕೇವಲ ಬೈಕ್ ಹಾಗೂ ಕಾರುಗಳಂತಹ ಲಘು ವಾಹನಗಳ ಓಡಾಟಕ್ಕಾದರೂ ಅವಕಾಶ ಮಾಡಿಕೊಡುವಂತೆ ಕಾಮಗಾರಿ ನಡೆಸುತ್ತಿರುವ ಕೆ.ಆರ್.ಸಿ.ಡಿ.ಎಲ್ ಸಂಸ್ಥೆಯ ಅಧಿಕಾರಿಗಳ ಬಳಿ ಮನವಿ ಮಾಡಲಾಗಿದೆ. ಸ್ಥಳೀಯರ ಈ ಮನವಿಗೆ ಸಂಸ್ಥೆಯ ಕಡೆಯಿಂದ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಯುವ ಮುಖಂಡ ನಾಗೋಡಿ ವಿಶ್ವನಾಥ್ ಅವರು ಮಾಹಿತಿ ನೀಡಿದರು.

ಒಟ್ಟಿನಲ್ಲಿ, ಇಂದು ಕಾಮಗಾರಿ ವೀಕ್ಷಿಸಿ ಸಂತಸಪಟ್ಟಿರುವ ಮುಳುಗಡೆ ಸಂತ್ರಸ್ತ ಗ್ರಾಮಸ್ಥರು, ತಮ್ಮ ದಶಕಗಳ ಕನಸಿನ ಸೇತುವೆಯ ಮೇಲೆ ಮುಕ್ತವಾಗಿ ಸಂಚರಿಸುವ ಹಾಗೂ ತಮ್ಮ ನೆಚ್ಚಿನ ಶಾಸಕರು ಸಚಿವರಾಗಿ ಬಂದು ಈ ಸೇತುವೆಯನ್ನು ಅಧಿಕೃತವಾಗಿ ಜನರ ಬಳಕೆಗೆ ಮುಕ್ತಗೊಳಿಸುವ ಆ ಸುದಿನಕ್ಕಾಗಿ ಅತ್ಯಂತ ಕಾತರದಿಂದ ಕಾಯುತ್ತಿದ್ದಾರೆ.

ಈ ಸಂಧರ್ಭದಲ್ಲಿ ಮುಖಂಡರಾದ ಗಣಪತಿ ಜಾಲ , ಚಂದಯ್ಯ ಜೈನ್ ನಾಗೋಡಿ , ರಾಘವೇಂದ್ರ ಆಚಾರ್ ಕೆಬಿ ಸರ್ಕಲ್ , ರವೀಂದ್ರ ಚನ್ನಪ್ಪ ನಿಟ್ಟೂರು , ಪರಮೇಶ್ವರ ಕೂಡ್ಲುಕೊಪ್ಪ , ಸುಬ್ರಹ್ಮಣ್ಯ ಜೀವಿ ನಿಟ್ಟೂರು , ಸಂತೋಷ್ ಜಿ ಕೆ , ರವೀಶ್ ಇಕ್ಕಿಬೀಳು , ಮಂಜು ಲಕ್ಮನೆ ಹಾಗೂ ಇನ್ನಿತರರು ಇದ್ದರು‌.

ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ರಿಪ್ಪನ್‌ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ

ರಿಪ್ಪನ್‌ಪೇಟೆಯ ನಿವೃತ್ತ ಶಿಕ್ಷಕ, ಶಿಕ್ಷಣ ಪ್ರೇಮಿ ಬಿ. ಶೇಖರಪ್ಪ ಮಾಸ್ಟರ್ ನಿಧನ; ರಂಭಾಪುರಿ ಜಗದ್ಗುರುಗಳಿಂದ ಸಂತಾಪ Retired teacher and…

10 hours ago

ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್‌ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ

ಸಾಗರೋತ್ತರದಲ್ಲೂ ಹುಟ್ಟೂರಿನ ಕಳಕಳಿ | ನೊಂದವರ ಬಾಳಲ್ಲಿ ಬೆಳಕಾದ ರಿಪ್ಪನ್‌ಪೇಟೆಯ ಜಿಸಿಸಿ ಯುವಪಡೆಗೆ ಶಾಸಕರಿಂದ ವಿಶೇಷ ಸನ್ಮಾನ ​ಮಾನವೀಯತೆಯೆಂಬುದು ಕೇವಲ…

11 hours ago

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ - ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ಸೌಹಾರ್ಧ…

11 hours ago

ರಿಪ್ಪನ್‌ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ. ಭಾನುಪ್ರಕಾಶ್ ಕರೆ

ರಿಪ್ಪನ್‌ಪೇಟೆ ಗಣೇಶೋತ್ಸವ ರಾಜ್ಯಕ್ಕೇ ಮಾದರಿಯಾಗಲಿ: ಶಾಂತಿ ಸಮಿತಿ ಸಭೆಯಲ್ಲಿ ಎಎಸ್ ಪಿ ಡಾ.ಭಾನುಪ್ರಕಾಶ್ ಕರೆ Thirthahalli DySP Dr. Bhanuprakash…

12 hours ago

ರಿಪ್ಪನ್‌ಪೇಟೆಯ ಹೆಮ್ಮೆಯ ವಿದ್ಯಾದೇಗುಲಕ್ಕೆ 100 ವರ್ಷ; ಸೆ.10ರಂದು ಹಳೆಯ ವಿದ್ಯಾರ್ಥಿಗಳ ಮಹತ್ವದ ಸಭೆ

ರಿಪ್ಪನ್‌ಪೇಟೆಯ ಹೆಮ್ಮೆಯ ವಿದ್ಯಾದೇಗುಲಕ್ಕೆ 100 ವರ್ಷ; ಸೆ.10ರಂದು ಹಳೆಯ ವಿದ್ಯಾರ್ಥಿಗಳ ಮಹತ್ವದ ಸಭೆ ಶತಮಾನೋತ್ಸವ ಆಚರಣೆಗೆ ಭರ್ಜರಿ ಸಿದ್ಧತೆ :…

16 hours ago

ಗಣೇಶೋತ್ಸವ ಹಿನ್ನೆಲೆ: ಸೆ.4ರಂದು ರಿಪ್ಪನ್‌ಪೇಟೆಯಲ್ಲಿ ಎಎಸ್‌ಪಿ ಭಾನುಪ್ರಕಾಶ್ ನೇತೃತ್ವದಲ್ಲಿ ಶಾಂತಿ ಸಭೆ

ಗಣೇಶೋತ್ಸವ ಹಿನ್ನೆಲೆ: ಸೆ.4ರಂದು ರಿಪ್ಪನ್‌ಪೇಟೆಯಲ್ಲಿ ಎಎಸ್‌ಪಿ ಭಾನುಪ್ರಕಾಶ್ ನೇತೃತ್ವದಲ್ಲಿ ಶಾಂತಿ ಸಭೆ A peace meeting for Ganesh festival…

2 days ago