Headlines

ಹೊಸನಗರ ವಿಧಾನಸಭಾ ಕ್ಷೇತ್ರ ಬೇಡಿಕೆ ಹೋರಾಟ ರಾಜಕೀಯ ಪ್ರೇರಿತ  – ವಾಟಗೋಡು ಸುರೇಶ್ ಆರೋಪ

ಹೊಸನಗರ ವಿಧಾನಸಭಾ ಕ್ಷೇತ್ರ ಬೇಡಿಕೆ ಹೋರಾಟ ರಾಜಕೀಯ ಪ್ರೇರಿತ  – ವಾಟಗೋಡು ಸುರೇಶ್ ಆರೋಪ

Janahita Ranga state coordinator Watagodu Suresh questions national party leaders over protests demanding Hosanagara constituency formation, calling the movement politically motivated.

ರಿಪ್ಪನ್ ಪೇಟೆ: ಸರ್ಕಾರದಲ್ಲಿ ಶಾಸನ ರೂಪಿಸುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಪಕ್ಷಗಳ ನಾಯಕರು ಹೊಸನಗರ ಕ್ಷೇತ್ರ ರಚನೆ ವಿಷಯದಲ್ಲಿ ಪಾದಯಾತ್ರೆ ಹಾಗೂ ಪ್ರತಿಭಟನೆಗಳಿಗೆ ಕರೆ ನೀಡುತ್ತಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ ಎಂದು ಜನಹಿತ ರಂಗದ ರಾಜ್ಯ ಸಂಚಾಲಕ ವಾಟಗೋಡು ಸುರೇಶ್ ಅಭಿಪ್ರಾಯಪಟ್ಟರು.

ಗ್ರಾಮ ಪಂಚಾಯಿತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸನಗರ–ರಿಪ್ಪನ್‌ಪೇಟೆ ಭಾಗದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ರಾಷ್ಟ್ರೀಯ ನಾಯಕರ ಗಮನ ಸೆಳೆಯುವ ಪ್ರಭಾವಿಗಳಿದ್ದಾರೆ. ಎರಡೂ ಪಕ್ಷಗಳು ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವಾಗ ಕ್ಷೇತ್ರ ಉಳಿಸುವ ಹೋರಾಟವನ್ನು ಅಧಿಕಾರದಲ್ಲಿರುವ ನಾಯಕರೇ ನಡೆಸುತ್ತಿರುವುದು ಪ್ರಶ್ನಾರ್ಹವಾಗಿದೆ. ಈ ಹೋರಾಟ ಯಾರ ವಿರುದ್ಧ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಬೇಕು ಎಂದು ಹೇಳಿದರು.

ಕ್ಷೇತ್ರ ಪುನರ್‌ವಿಂಗಡಣೆ ರಾಷ್ಟ್ರ ಮಟ್ಟದ ನಿಯಮವಾಗಿದ್ದು, ಸ್ಥಳೀಯ ಬೇಡಿಕೆ ಆಧಾರದಲ್ಲಿ ರಾಜ್ಯದಲ್ಲಿ ಹೊಸ ಕ್ಷೇತ್ರ ರಚನೆ ಸಾಧ್ಯವಿಲ್ಲ. ಈ ಸಂಬಂಧ ಯಾವುದೇ ವಿಧೇಯಕವೂ ಲೋಕಸಭೆಯಲ್ಲಿ ಮಂಡನೆಯಾಗಿಲ್ಲ. ಆದರೂ ಕೆಲವರು ರಾಜಕೀಯ ಅಸ್ತಿತ್ವಕ್ಕಾಗಿ ಅವಸರದ ನಡೆ ತಾಳುತ್ತಿದ್ದಾರೆ. ದೆಹಲಿಯಲ್ಲಿ ನಿರ್ಧಾರವಾಗುವ ವಿಷಯವನ್ನು ಸ್ಥಳೀಯ ಮಟ್ಟದಲ್ಲಿ ಪರಿಹರಿಸುವುದು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಜನರನ್ನು ತಪ್ಪು ದಾರಿಗೆಳೆದು ಗೊಂದಲ ಸೃಷ್ಟಿಸುವ ಪ್ರಯತ್ನಗಳನ್ನು ತಪ್ಪಿಸಬೇಕು. ತಾಲ್ಲೂಕಿನಲ್ಲಿ ಮುಳಗಡೆ, ಬಗರ್ ಹುಕುಂ, ವಿದ್ಯುತ್ ಹಾಗೂ ಅರಣ್ಯ ಭೂಮಿ ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳಿವೆ. ಇವುಗಳಿಗೆ ಪರಿಹಾರ ಕಂಡುಹಿಡಿಯಲು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಕ್ಷೇತ್ರದ ಅಸ್ತಿತ್ವದ ಅಗತ್ಯವನ್ನು ನಾವು ಬೆಂಬಲಿಸುತ್ತೇವೆ. ಆದರೆ ಅಗತ್ಯ ಸಮಯದಲ್ಲಿ ಮೌನವಾಗಿ ಇದ್ದು, ನಂತರ ಅಪ್ರಸ್ತುತ ಸಂದರ್ಭದಲ್ಲಿ ಹೋರಾಟ ನಡೆಸುವುದು ಅರ್ಥಹೀನವಾಗಿದೆ ಎಂದು ಸುರೇಶ್ ಟೀಕಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿಯ ಸದಸ್ಯ ಅಮ್ಮಿರ್ ಹಂಜಾ ಉಪಸ್ಥಿತರಿದ್ದರು.

About The Author

Exit mobile version