ಗಾಂಜಾ ವ್ಯವಹಾರಕ್ಕೆ ಅಡ್ಡಿಯಾದ ಅಜ್ಜಿಯನ್ನೇ ಸೈಜ್ ಕಲ್ಲಿನಿಂದ ಕೊಂದು ಬರ್ಬರ ಹತ್ಯೆ ಮಾಡಿದ ಮೊಮ್ಮಗ!
An elderly woman was allegedly murdered by her grandson with a stone in Shivamogga after she attempted to file a police complaint against his alleged ganja trade. Police have detained the accused and are investigating the case.
ಶಿವಮೊಗ್ಗ: ಗಾಂಜಾ ವ್ಯವಹಾರದ ವಿರುದ್ಧ ಪೊಲೀಸರಿಗೆ ದೂರು ನೀಡಲು ತೆರಳುತ್ತಿದ್ದ ಅಜ್ಜಿಯನ್ನೇ ಮೊಮ್ಮಗ ಸೈಜ್ ಕಲ್ಲಿನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಸಂಜೆ ಶಿವಮೊಗ್ಗ ನಗರದ ಮಿಳಘಟ್ಟ ವಾರ್ಡ್ನ ಆನಂದರಾವ್ ಬಡಾವಣೆಯಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿಯಾಗಿರುವ ವೃದ್ಧೆ ಎಂದು ಗುರುತಿಸಲಾಗಿದ್ದು, ಆರೋಪಿ ಮೊಮ್ಮಗ ಕಿಶೋರ್ ಎಂದು ತಿಳಿದುಬಂದಿದೆ. ಘಟನೆ ತಬ್ಬಾ ಮಸೀದಿ ಸಮೀಪದ ರಸ್ತೆಯಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ಕಿಶೋರ್ ಗಾಂಜಾ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾನೆ ಎನ್ನಲಾಗಿದ್ದು, ಈ ವಿಚಾರವನ್ನು ವಿರೋಧಿಸುತ್ತಿದ್ದ ಅಜ್ಜಿ ಪದೇ ಪದೇ ಪೊಲೀಸರಿಗೆ ದೂರು ನೀಡುತ್ತಿದ್ದರು. ಬುಧವಾರ ಸಂಜೆ ಕೂಡ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೊರಟಿದ್ದ ವೇಳೆ, ಕೋಪಗೊಂಡ ಕಿಶೋರ್ ಅಜ್ಜಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಯಿಂದ ಅಜ್ಜಿ ರಸ್ತೆಗೆ ಬಿದ್ದ ಕೂಡಲೇ, ಅಲ್ಲೇ ಇದ್ದ ಸೈಜ್ ಕಲ್ಲನ್ನು ಎತ್ತಿ ತಲೆಯ ಮೇಲೆ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




