Jagadguru Dr. Mallikarjuna Murugharajendra Swamiji emphasized the importance of value-based education for children during the SSLC farewell and parents’ padapuja program held at Sri Gurubasaveshwara Kannada and English Medium School in Ripponpet.
ರಿಪ್ಪನ್ಪೇಟೆ: ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರೆತರೆ ಅದೇ ನಿಜವಾದ ಶಿಕ್ಷಣವಾಗುತ್ತದೆ. ತಂದೆ-ತಾಯಿ, ಗುರು ಹಾಗೂ ಹಿರಿಯರ ಮೇಲೆ ತೋರುವ ಭಕ್ತಿ-ಶ್ರದ್ಧೆಯೇ ನಮ್ಮ ಮುಂದಿನ ಜೀವನಕ್ಕೆ ದಾರಿದೀಪವಾಗುತ್ತದೆ ಎಂದು ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಗುರುಬಸವೇಶ್ವರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಪೋಷಕರಿಗೆ ಪಾದಪೂಜೆ ಹಾಗೂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸನಾತನ ಸಂಸ್ಕೃತಿಯಲ್ಲಿ ಅನಾದಿಕಾಲದಿಂದಲೂ ತಂದೆ-ತಾಯಿಯನ್ನು ದೇವರಂತೆ ಪೂಜಿಸುವ ಪರಂಪರೆ ಇದೆ. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಅತಿಯಾದ ಪಾಶ್ಚಾತ್ಯ ಚಿಂತನೆ ಮತ್ತು ಮೊಬೈಲ್ ಮುಂತಾದ ಆಕರ್ಷಣೆಗಳಿಂದ ಮೌಲ್ಯಾಧಾರಿತ ಶಿಕ್ಷಣ ಕುಗ್ಗುತ್ತಿರುವುದು ಕಂಡುಬರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ನೈಜ ಶಿಕ್ಷಣದ ಪುನರುತ್ಥಾನವಾಗಬೇಕಾದರೆ ಮಕ್ಕಳಲ್ಲಿ “ನಾವು ತಂದೆ-ತಾಯಿಗೆ ಸಮರ್ಪಿತರಾಗಿದ್ದೇವೆ” ಎಂಬ ಭಾವನೆ ಬೆಳೆಬೇಕು. ಪೋಷಕರಿಗೆ ಪಾದಪೂಜೆ ಮಾಡುವಂತಹ ಪರಂಪರೆ ಮಕ್ಕಳಲ್ಲಿ ಗೌರವ ಮತ್ತು ಕೃತಜ್ಞತೆಯ ಮನೋಭಾವ ಬೆಳೆಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸಸ್ಯ ಸಂಶೋಧನೆ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಅನಂತಮೂರ್ತಿ ಜವಳಿ ಅವರನ್ನು ಶ್ರೀಗುರುಬಸವೇಶ್ವರ ಶಾಲೆಯಲ್ಲಿ ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಂತಮೂರ್ತಿ ಜವಳಿ, ಪರಿಸರ ಹಾಗೂ ಸಸ್ಯ ಸಂರಕ್ಷಣೆಯಲ್ಲಿ ಮಾಡಿದ ಕಾರ್ಯವನ್ನು ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿದೆ. ಈ ಗೌರವಗಳು ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡುತ್ತವೆ ಎಂದು ಹೇಳಿದರು. ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಉದ್ಯೋಗದಲ್ಲಿದ್ದರೂ, ವಯಸ್ಸಾದ ಪೋಷಕರನ್ನು ನೋಡಿಕೊಳ್ಳಲು ನಮ್ಮ ಜೊತೆಯೇ ಇರುವುದರಿಂದ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು.
ಇಂದಿನ ಕಾಲದಲ್ಲಿ ವೃದ್ಧಾಶ್ರಮಗಳಿಗೆ ಪೋಷಕರನ್ನು ಕಳುಹಿಸುವ ಘಟನೆಗಳು ಹೆಚ್ಚುತ್ತಿರುವುದು ನೋವಿನ ಸಂಗತಿ. ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ಕಲಿಸುವ ಶಿಕ್ಷಣ ಎಷ್ಟು ಅಗತ್ಯ ಎಂಬುದನ್ನು ಸಮಾಜ ಅರಿಯಬೇಕಾಗಿದೆ ಎಂದು ಮನಮುಟ್ಟುವಂತೆ ಹೇಳಿದರು.
ಎಸ್.ಜೆ.ಜಿ. ವಿದ್ಯಾಪೀಠದ ನಿರ್ದೇಶಕ ಜೆ.ಎಸ್. ಚಂದ್ರಪ್ಪ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಮಳಕೊಪ್ಪ ಈಶ್ವರ ವಹಿಸಿದ್ದರು. ಎಸ್.ಜೆ.ಜಿ. ವಿದ್ಯಾಪೀಠದ ನಿರ್ದೇಶಕ ಎಲ್.ವೈ. ದಾನೇಶಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಿರ್ದೇಶಕ ಚಂದ್ರಶೇಖರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್ ಕಾಮ್ಳೆ, ಮುಖ್ಯಶಿಕ್ಷಕ ಕೆ.ಎನ್. ಚಂದ್ರಪ್ಪ, ಹೆಚ್.ಎಂ. ವರ್ತೇಶ್ ಹುಗುಡಿ, ಗುರುಪ್ರಸಾದ್, ಮಂಜುನಾಥ ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಮಾರಿ ಬಿ.ಬಿ. ಸುಮಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಮೇಘನ ವಂದಿಸಿದರು.
ಅಸ್ಪೃಶ್ಯತಾ ಕಳಂಕ ನಿರ್ಮೂಲನೆಗಾಗಿ ಬೀದಿ ನಾಟಕದ ಮೂಲಕ ಜನಜಾಗೃತಿ
ರಿಪ್ಪನ್ಪೇಟೆ;-ದೇಶಕ್ಕೆ ಸ್ವಾತಂತ್ರ ಬಂದು ಏಳುವರೆ ದಶಕಗಳಾದರೂ ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗು ಸಂಪೂರ್ಣವಾಗಿ ನಿವಾರಣೆಯಾಗಿಲ್ಲ.ಸಮಾಜದಲ್ಲಿ ಕೆಲವು ಕಡೆ ಈ ಕಳಂಕ ಬೇರುರಿರುವುದು ದು:ಖಕರ ಸಂಗತಿಯಾಗಿದೆ. ಆಸ್ಪಸೃಶ್ಯತೆಯನ್ನು ಬುಡಸಮೇತನಿರ್ಮೂಲನೆ ಮಾಡಲು ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಿ ಸರ್ವಾಂಗೀಣ ಸಹಕಾರ ನೀಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ರಾಘವೇಂದ್ರ ಕರೆ ನೀಡಿದರು.
ಶಿವಮೊಗ್ಗ ಜಿಲ್ಲಾ ಪಂಚಾಯಿತ್ ಸಮಾಜ ಕಲ್ಯಾಣ ವತಿಯಿಂದ ರಿಪ್ಪನ್ಪೇಟೆಯ ವಿನಾಯಕ ವೃತ್ತದಲ್ಲಿ ಹೊಸನಗರ ತಾಲ್ಲೂಕ್ ಸಂಸ್ಕೃತಿ ಕಲಾತಂಡ ಹುಣಸೋಡು ವತಿಯಿಂದ ನಡೆದ ಬೀದಿ ನಾಟಕ ಪ್ರದರ್ಶದಲ್ಲಿ ಭಾಗವಹಿಸಿ ಮಾತನಾಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜನಾಂಗದವರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ ಆಸ್ಪೃಶ್ಯತಾ ನಿವಾರಣೆ ಮತ್ತು ಅಭಿವೃದ್ದಿ ಕುರಿತು ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಬಲವಾಗಿ ನೆಲೆಯಾಗಬೇಕಾದರೆ ಪ್ರತಿಯೊಬ್ಬರೂ ಜಾತಿ ಮತ ಭೇದ ಭಾವವನ್ನು ತೊರೆದು ಪರಸ್ಪರ ಗೌರವ ಮತ್ತು ಸಹಕಾರದ ಮನೋಭಾವವನ್ನು ಬೇಳಸಿಕೊಳ್ಳಬೇಕು.ಅಸ್ಪೃಶ್ಯತೆ ಮಾನವೀಯತೆಗೆ ವಿರುದ್ದವಾದ ಅಮಾನವೀಯ ಅಚರಣೆಯಾಗಿದ್ದು ಇದು ಸಂವಿಧಾನಾತ್ಮಕ ಹಕ್ಕುಗಳಿಗೆ ದಕ್ಕೆ ಉಂಟು ಮಾಡುತ್ತದೆ ಅದ್ದರಿಂದ ಇದನ್ನು ನಿರ್ಮೂಲನೆ ಮಾಡಲು ಸರ್ಕಾರ ಮಾತ್ರವಲ್ಲ ಸಮಾಜದ ಪ್ರತಿಯೊಂದು ವರ್ಗದ ಜನರು ಜಾಗೃತರಾಗಬೇಕು ಎಂದು ತಿಳಿಸಿದರು.
ಹೊಸನಗರ ತಾಲ್ಲೂಕ್ ಹುಣಸೋಡು ಸಂಸ್ಕೃತಿ ಕಲಾತಂಡದವರಿಂದ ಬೀದಿ ನಾಟಕ ಪ್ರದರ್ಶನ ಜರುಗಿತು.
ಈ ಸಂದರ್ಭದಲ್ಲಿ ಕಲ್ಲೂರು ಈರಪ್ಪ, ಪ್ಯಾನ್ಸಿ ರಮೇಶ್,ಗ್ರಾಮ ಪಂಚಾಯಿತ್ ಬಿಲ್ ಕಲೆಕ್ಟರ್ ನಾಗೇಶ ಹಾಜರಿದ್ದರು.




