Headlines

ಐತಿಹಾಸಿಕ ಪ್ರಸಿದ್ಧ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ವೈಭವದ ಚಾಲನೆ

A grand start to the Durga Devi Jatra festival at the historic and famous grove

ಐತಿಹಾಸಿಕ ಪ್ರಸಿದ್ಧ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವಕ್ಕೆ ವೈಭವದ ಚಾಲನೆ

A grand start to the Durga Devi Jatra festival at the historic and famous grove

ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಐತಿಹಾಸಿಕ ಪ್ರಸಿದ್ಧಿ ಪಡೆದ ಶ್ರೀ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ ವೈಭವದಿಂದ ನಡೆಯಿತು. ಪಲ್ಲಕ್ಕಿ ಉತ್ಸವ, ಮಹಾಭಿಷೇಕ, ಭಕ್ತರ ಸೇವೆ ಹಾಗೂ ರಾಜ್ಯಮಟ್ಟದ ಜಂಗಿ ಬಯಲು ಕುಸ್ತಿ ಪ್ರಮುಖ ಆಕರ್ಷಣೆ.

ಬಂಕಾಪುರ: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಹಾಗೂ ಮುನವಳ್ಳಿ ಗ್ರಾಮಗಳ ಆರಾಧ್ಯ ದೈವವಾದ ಶ್ರೀ ಜಗನ್ಮಾತೆ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವವು ಸಾಂಪ್ರದಾಯಿಕ ವೈಭವದೊಂದಿಗೆ ಆರಂಭಗೊಂಡಿದೆ.

ಜಾತ್ರೆಯ ಅಂಗವಾಗಿ ಬಂಕಾಪುರ ಪಟ್ಟಣದ ಕಣೊಜಗಲ್ಲಿಯಿಂದ ಶ್ರೀ ದುರ್ಗಾದೇವಿಯ ಪಲ್ಲಕ್ಕಿ ಉತ್ಸವವು ಸಕಲ ವಾದ್ಯ ವೈಭವದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಡೊಳ್ಳುಕುಣಿತ, ಓಲಗ, ಜಾಜುಮೇಳ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಾದ್ಯಗಳೊಂದಿಗೆ ನಡೆದ ಮೆರವಣಿಗೆ ಭಕ್ತರಲ್ಲಿ ಅಪಾರ ಉತ್ಸಾಹ ಮೂಡಿಸಿತು. ಬಳಿಕ ಪಲ್ಲಕ್ಕಿ ಉತ್ಸವವು ಶ್ರೀ ತೋಪಿನ ದುರ್ಗಾದೇವಿ ಗರ್ಭಗುಡಿಗೆ ಪ್ರವೇಶಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಶುಕ್ರವಾರ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ದುರ್ಗಾದೇವಿಗೆ ಮಹಾಭಿಷೇಕ ನೆರವೇರಿಸಲಾಯಿತು. ನಂತರ ಭಕ್ತರು ಉರುಳು ಸೇವೆ, ದೀಡ್ ನಮಸ್ಕಾರ ಸೇರಿದಂತೆ ವಿವಿಧ ಸೇವೆಗಳ ಮೂಲಕ ದೇವಿಗೆ ಭಕ್ತಿ ಸಮರ್ಪಿಸಿದರು. ದೇವಿಗೆ ನೇವೇದ್ಯವಾಗಿ ಪ್ರಸಾದ ಅರ್ಪಿಸಲಾಯಿತು.

ಜಾತ್ರಾ ಮಹೋತ್ಸವಕ್ಕೆ ಬಂಕಾಪುರ, ಮುನವಳ್ಳಿ, ಬಾಡ, ಹೋತನಹಳ್ಳಿ, ಹಳೆ ಬಂಕಾಪುರ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಜಂಗಿ ಬಯಲು ಕುಸ್ತಿಯನ್ನು ಆಯೋಜಿಸಲಾಗಿದ್ದು, ಕರ್ನಾಟಕ ಕೇಸರಿ, ಮಹಾರಾಷ್ಟ್ರ, ಸಾಂಗ್ಲಿ ಸೇರಿದಂತೆ ವಿವಿಧ ಪ್ರದೇಶಗಳಿಂದ ಅನೇಕ ಪ್ರಶಸ್ತಿ ಪಡೆದ ಪೈಲ್ವಾನರು ಭಾಗವಹಿಸುತ್ತಿದ್ದಾರೆ.

ಪುರಾತನ ಐತಿಹಾಸಿಕ ಪ್ರಸಿದ್ಧಿ ಪಡೆದ ಉದ್ಭವ ಮೂರ್ತಿಯೆಂದು ಖ್ಯಾತಿಯಾಗಿರುವ ಶ್ರೀ ತೋಪಿನ ದುರ್ಗಾದೇವಿ ಜಾತ್ರೆಯನ್ನು ಪ್ರತಿ ವರ್ಷ ಹುಣ್ಣಿಮೆಯ ಪೂರ್ವದಲ್ಲಿ ಆಚರಿಸಲಾಗುತ್ತದೆ. ಈ ಬಾರಿ ಕೂಡ ಜಾತ್ರೆ ಭಕ್ತಿಭಾವ, ಸಂಪ್ರದಾಯ ಹಾಗೂ ಕ್ರೀಡಾ ವೈಭವದೊಂದಿಗೆ ನಡೆಯುತ್ತಿದೆ.

ವರದಿ: ನಿಂಗರಾಜ ಕುಡಲ್
ಸ್ಥಳ: ಬಂಕಾಪುರ, ಹಾವೇರಿ ಜಿಲ್ಲೆ

Exit mobile version