ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿಯ ಶವ ಕೆರೆಯಲ್ಲಿ ಪತ್ತೆ
ಜಾತಿವಾರು ಸಮೀಕ್ಷಾ ಕಾರ್ಯಕ್ಕೆ ತೆರಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಶಿಕ್ಷಕಿಯ ಶವ ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಬಳಿಯ ಅಯ್ಯಪ್ಪಲ್ಲಿ ಕೆರೆಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಲಾಗಿದೆ.
ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯ ಅಖ್ತರ್ ಬೇಗಂ (50) ಮೃತ ಶಿಕ್ಷಕಿ.
ಬೇತಮಂಗಲ ಪೊಲೀಸರು ಮೃತದೇಹವನ್ನು ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಗೆ ರವಾನಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಕೋಲಾರ ತಾಲ್ಲೂಕಿನ ಕೆ.ಬಿ.ಹೊಸಹಳ್ಳಿಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಖ್ತರ್ ಬೇಗಂ ಅವರನ್ನು ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿವಾರು ಸಮೀಕ್ಷೆ ನಡೆಸಲು ತಾಲ್ಲೂಕಿನ ನರಸಾಪುರ ಗ್ರಾಮಕ್ಕೆ ಅವರನ್ನು ನಿಯೋಜಿಲಾಗಿತ್ತು.
ಸೋಮವಾರ ಬೆಳಿಗ್ಗೆಯಿಂದ ಅವರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮೊಬೈಲ್ ಮನೆಯಿಲ್ಲಿಟ್ಟು, ಗುರುತಿನ ಚೀಟಿ ತೆಗೆದುಕೊಂಡು ಸಮೀಕ್ಷೆಗೆ ಹೋಗಿದ್ದರು. ಅವರ ಪತ್ತೆಗೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆತಂಕಗೊಂಡಿದ್ದ ಕುಟುಂಬಸ್ಥರು ಕಾಣೆಯಾಗಿರುವ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಕೂಡ ದಾಖಲಾಗಿತ್ತು.
ಸಮೀಕ್ಷೆಯಲ್ಲಿ ಸುತ್ತಾಟ, ಸರಿಯಾಗಿ ಕುಟುಂಬಗಳು ಸಿಗದಿರುವುದು, ಒತ್ತಡದಿಂದ ಶಿಕ್ಷಕಿಯು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಸಮಸ್ಯೆಯನ್ನು ಸಹ ಶಿಕ್ಷಕರ ಜೊತೆ ಹೇಳಿಕೊಂಡಿದ್ದರು ಎಂಬುದು ಗೊತ್ತಾಗಿದೆ. ಸಮೀಕ್ಷೆಯ ಒತ್ತಡದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲ ಶಿಕ್ಷಕರು ಆರೋಪಿಸಿದರು.ಅಖ್ತರ್ ಬೇಗಂ ಈ ಹಿಂದೆ ಬೇತಮಂಗಲ ಹೋಬಳಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ, ಬೇತಮಂಗಲ ಕೆರೆಗಳು ತುಂಬಿವೆಯೇ, ನೋಡಬೇಕು ಎನಿಸುತ್ತಿದೆ ಎಂಬುದಾಗಿ ಈಚೆಗೆ ಹೇಳಿಕೊಂಡಿದ್ದರು ಎಂದು ಶಿಕ್ಷಕಿಯರು ತಿಳಿಸಿದರು.
ಬೇತಮಂಗಲ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ.ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
