Headlines

HOSANAGARA | ಯೂಟ್ಯೂಬ್ ಜಾಹೀರಾತು ನಂಬಿ 49 ಲಕ್ಷ ಕಳೆದುಕೊಂಡ ಮಹಿಳೆ

HOSANAGARA | ಯೂಟ್ಯೂಬ್ ಜಾಹೀರಾತು ನಂಬಿ 49 ಲಕ್ಷ ಕಳೆದುಕೊಂಡ ಮಹಿಳೆ

ಹೊಸನಗರ: ಯೂಟ್ಯೂಬ್‌ನಲ್ಲಿ ಕಂಡ ‘ಹೆಚ್ಚು ಲಾಭಾಂಶ’ದ ಆಮಿಷ ನೀಡಿದ ಹೂಡಿಕೆ ಜಾಹೀರಾತನ್ನು ನಂಬಿ, ಹೊಸನಗರದ ಮಹಿಳೆಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು 49 ಲಕ್ಷ ರೂ.ಗೂ ಹೆಚ್ಚು ಮೊತ್ತ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನಲೆ :

ಮಹಿಳೆ ಯೂಟ್ಯೂಬ್ ವೀಕ್ಷಿಸುವ ವೇಳೆ ಷೇರು ಮಾರುಕಟ್ಟೆ ಮಾರ್ಗದರ್ಶನ ನೀಡುವುದಾಗಿ ಹೇಳಿಕೊಂಡಿದ್ದ ಜಾಹೀರಾತೊಂದು ತೋರ್ಪಡಿಸಿತು. ಜಾಹೀರಾತಿನ ಕೆಳಗೆ ನೀಡಿದ್ದ ವಾಟ್ಸ್‌ಆ್ಯಪ್ ಗುಂಪಿಗೆ ಸೇರುವ ಲಿಂಕ್‌ನ್ನು ಕ್ಲಿಕ್ ಮಾಡಿದ ಮಹಿಳೆಯನ್ನು, ನಂತರ ನೇರವಾಗಿ ಒಂದು ವಾಟ್ಸಾಪ್ ಗ್ರೂಪಿಗೆ ಸೇರಿಸಲಾಯಿತು.

ಆ ಗುಂಪಿನಲ್ಲಿ ‘ಹೊಚ್ಚ ಲಾಭ’ದ ವಹಿವಾಟು ಮಾಡುವಂತೆ, ವಿಶೇಷ ಆ್ಯಪ್ ಡೌನ್‌ಲೋಡ್ ಮಾಡಿಸುವಂತೆ ಸೂಚಿಸಲಾಯಿತು. ನಂತರ ತಮ್ಮನ್ನು ಕಂಪನಿಯ ‘ವ್ಯವಸ್ಥಾಪಕರು’ ಎಂದು ಪರಿಚಯಿಸಿದ ವ್ಯಕ್ತಿ, ಹೂಡಿಕೆಗೆ ಬೇಕಾದ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಕಳುಹಿಸಿದರು. ಹೆಚ್ಚಿನ ಲಾಭ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಮಹಿಳೆ ಮೊದಲಿನ ದಿನಗಳಲ್ಲಿ ತನ್ನ ಪತಿಯ ಖಾತೆಯಿಂದ ಹಾಗೂ ನಂತರ ಬೇರೆ ಬೇರೆ ಖಾತೆಗಳಿಂದ ಹಂತ ಹಂತವಾಗಿ ಒಟ್ಟು ₹49,15,047ರನ್ನು ಆ ಖಾತೆಗಳಿಗೆ ವರ್ಗಾಯಿಸಿದರು.

ಲಾಭ ತೋರಿಸಿ ನಂತರ ಬೀಗ

ಆ್ಯಪ್‌ನಲ್ಲಿ ಹೂಡಿಕೆ ಮೊತ್ತ ಹಾಗೂ ಲಾಭ ಸೇರಿ 3 ಕೋಟಿಗೂ ಹೆಚ್ಚಿನ ಮೊತ್ತ ‘ಕ್ರೆಡಿಟ್’ ಆಗಿರುವಂತೆ ತೋರಿಸಿ ಮಹಿಳೆಯನ್ನು ನಂಬುವಂತೆ ಮಾಡಲಾಯಿತು. ಆದರೆ ಹಣವನ್ನು ವಿತ್‌ಡ್ರಾ ಮಾಡುವಾಗ ಅಡ್ಡಿ ಉಂಟಾಗಿ, ಕಂಪನಿಯವರನ್ನು ಸಂಪರ್ಕಿಸಿದಾಗ “ಹಿಂಪಡೆಯಲು ಮೊದಲು 15% ಶುಲ್ಕ ಕಟ್ಟಬೇಕು” ಎಂದು ಹೇಳಲಾಗಿದೆ. ಇದನ್ನು ಅನುಮಾನಿಸಿದ ಮಹಿಳೆ ಬಳಿಕ ತಮಗೆ ವಂಚನೆಯಾಗಿದೆ ಎಂಬುದು ಅರಿತು, ತಕ್ಷಣ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.

Exit mobile version