ಕೋಣಂದೂರಿನಲ್ಲಿ ದಾರುಣ ಘಟನೆ: ಹಾವು ಕಡಿದು ವೃದ್ಧೆ ಸಾವು
ತೀರ್ಥಹಳ್ಳಿ: ತಾಲೂಕಿನ ಕೋಣಂದೂರು ಸಮೀಪದ ಆಲಸೆ ಗ್ರಾಮದಲ್ಲಿ ನಡೆದ ಹಾವು ಕಡಿತದ ಘಟನೆ ದಾರುಣ ಅಂತ್ಯ ಕಂಡಿದೆ. ಕಪ್ಪೆಯನ್ನು ಬೆನ್ನಟ್ಟಿ ಬಂದ ನಾಗರಹಾವು ಜಾನಕಮ್ಮ (85) ಎಂಬ ವೃದ್ಧೆಯನ್ನು ಕಡಿದ ಪರಿಣಾಮ, ಅವರು ಮೃತಪಟ್ಟಿದ್ದಾರೆ.
ಘಟನೆಯ ನಂತರ ಆತಂಕಗೊಂಡ ಸ್ಥಳೀಯರು ತಕ್ಷಣ ಜಾನಕಮ್ಮ ಅವರನ್ನು ಹೊತ್ತು ಗೌರಿ ಹೊಳೆ ದಾಟಿ ನಡೆದುಕೊಂಡೇ ಕೋಣಂದೂರು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ತೀರ್ಥಹಳ್ಳಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ಮಧ್ಯಮಾರ್ಗದಲ್ಲೇ ಅವರು ಕೊನೆಯುಸಿರೆಳೆದರು.



