ರಿಪ್ಪನ್ ಪೇಟೆ ಸುತ್ತಮುತ್ತ ಭೂಮಿ ಹುಣ್ಣಿಮೆ ಸಂಭ್ರಮ –
ಹರತಾಳು ಹಾಲಪ್ಪ ಕುಟುಂಬದಿಂದ ಭೂಮಿ ಪೂಜೆ
ರಿಪ್ಪನ್ ಪೇಟೆ : ಪ್ರಕೃತಿಯೊಡನೆ ಮಾನವನ ನಂಟನ್ನು ಪ್ರತಿಬಿಂಬಿಸುವ, ಕೃಷಿಕ ಜೀವನಶೈಲಿಯ ಹೃದಯಸ್ಪರ್ಶಿ ಹಬ್ಬವೆಂದೇ ಖ್ಯಾತಿ ಪಡೆದಿರುವ ಭೂಮಿ ಹುಣ್ಣಿಮೆ ರಿಪ್ಪನ್ ಪೇಟೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಕ್ತಿಭಾವ– ಸಂಭ್ರಮ – ಸಡಗರಗಳಿಂದ ಆಚರಿಸಲಾಯಿತು.
ಬೆಳಗಿನ ಜಾವ ಗ್ರಾಮೀಣರು ಹೊಲ–ಗದ್ದೆ, ತೋಟಗಳಲ್ಲಿ ಹೊಸ ತಳಿರು ತೋರಣಗಳಿಂದ ಅಲಂಕರಿಸಿ ಭೂಮಿತಾಯಿಗೆ ಪೂಜೆ ಸಲ್ಲಿಸಿದರು. ಮಣ್ಣಿನ ಪರಿಮಳ, ತೆನೆಗಳ ಹೊಳಪು, ಮಳೆಯ ಹನಿಗಳ ಸಮಾಗಮ – ಇವೆಲ್ಲವು ಹಬ್ಬದ ಸೊಬಗನ್ನು ಮೆರಗುಗೊಳಿಸಿದವು.
ಹರತಾಳು ಗ್ರಾಮದಲ್ಲಿ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ಕುಟುಂಬಸ್ಥರು, ಬಂಧು–ಬಳಗ ಹಾಗೂ ಹಿತೈಷಿಗಳೊಂದಿಗೆ ಭೂಮಿ ಪೂಜೆಯಲ್ಲಿ ಪಾಲ್ಗೊಂಡರು. ಭಕ್ತಿಯಿಂದ ನಡೆದ ಈ ಪೂಜೆಯ ವೇಳೆ ಹಾಲಪ್ಪ ಅವರು ಮಾತನಾಡಿ “ಮಲೆನಾಡಿನ ಸಾಂಪ್ರದಾಯಿಕ ಜೀವನಶೈಲಿಯಲ್ಲಿ ಭೂಮಿ ಹುಣ್ಣಿಮೆ ವಿಶಿಷ್ಟ ಸ್ಥಾನ ಹೊಂದಿದೆ. ವಿಶೇಷವಾಗಿ ದೀವರ ಜನಾಂಗದಲ್ಲಿ ಭೂಮಿಯನ್ನು ತಾಯಿಯಂತೆ ಆರಾಧಿಸುವ ಸಂಸ್ಕೃತಿ ಪೀಳಿಗೆಯಿಂದ ಪೀಳಿಗೆ ಸಾಗುತ್ತಿದೆ. ಬತ್ತದ ತೆನೆ ಬರುವ ಈ ಸಮಯದಲ್ಲಿ ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸುವುದೇ ಹಬ್ಬದ ನಿಜವಾದ ಅರ್ಥ. ಮನೆಮಾತುಗಳೊಂದಿಗೆ ಸಾಂಪ್ರದಾಯಿಕ ಖಾದ್ಯಗಳನ್ನು ಹಂಚಿಕೊಳ್ಳುವುದರಿಂದ ಕುಟುಂಬಸೌಹಾರ್ದ ಹಾಗೂ ಸಮುದಾಯದ ಏಕತೆ ಮತ್ತಷ್ಟು ಬಲವಾಗುತ್ತದೆ. ಪ್ರಕೃತಿಯೊಡನೆ ಹೊಂದಾಣಿಕೆಯಿಂದ ಬದುಕುವುದು ನಮ್ಮ ಜೀವನದ ಮೂಲ ಮೌಲ್ಯ” ಎಂದು ಹೇಳಿದರು.
ಹಬ್ಬದ ಸಂದರ್ಭದಲ್ಲಿ ಹಿರಿಯರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಉತ್ಸಾಹ–ಹುಮ್ಮಸ್ಸಿನೊಂದಿಗೆ ಪಾಲ್ಗೊಂಡಿದ್ದು, ಹಳ್ಳಿಗಳಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ರಿಪ್ಪನ್ ಪೇಟೆ ಪಟ್ಟಣದ ಜೊತೆಗೆ ಮೂಗುಡ್ತಿ, ಹೆದ್ದಾರಿಪುರ, ಕೆಂಚನಾಳ, ಕೂಡೂರು, ಕಣಬಂದೂರು, ಬೆಳ್ಳೂರು, ಹಾರೋಹಿತ್ತಲು, ತಳಲೆ, ಕೋಟೆ ತಾರಿಗಜಿನಿ, ಕೋಡೂರು, ಗವಟೂರು, ಬರುವೆ, ಬೆಳಕೊಡು, ಕಾರಗೋಡು, ಕರಡಿಗ ಮುಂತಾದ ಗ್ರಾಮಗಳಲ್ಲೂ ಭೂಮಿ ಹುಣ್ಣಿಮೆ ಹಬ್ಬವು ಗ್ರಾಮೀಣರ ಭಕ್ತಿ, ಸಂಸ್ಕೃತಿ ಮತ್ತು ಏಕತೆಯ ಪ್ರತಿಬಿಂಬವಾಗಿ ಜರಗಿತು.



