Headlines

ರಿಪ್ಪನ್ ಪೇಟೆ ಗಣಪತಿ ರಾಜಬೀದಿ ಉತ್ಸವ – ಜುಮ್ಮಾ ಮಸೀದಿ ವತಿಯಿಂದ ಭಕ್ತಾಧಿಗಳಿಗೆ ಪಾನೀಯ ವಿತರಣೆ

ರಿಪ್ಪನ್ ಪೇಟೆ ಗಣಪತಿ ರಾಜಬೀದಿ ಉತ್ಸವ – ಜುಮ್ಮಾ ಮಸೀದಿ ವತಿಯಿಂದ ಭಕ್ತಾಧಿಗಳಿಗೆ ಪಾನೀಯ ವಿತರಣೆ

ರಿಪ್ಪನ್ ಪೇಟೆ : ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಲಾದ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸೇವಾ ಸಮಿತಿಯ 58ನೇ ವರ್ಷದ ಗಣಪತಿ ವಿಸರ್ಜನಾ ಪೂರ್ವ ವೈಭವದ ರಾಜಬೀದಿ ಉತ್ಸವದಲ್ಲಿ ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸಿಹಿ ಹಾಗೂ ಪಾನೀಯ ವಿತರಿಸಿ ಸೌಹಾರ್ಧ ಮೆರೆಯಲಾಯಿತು.

ಗಣಪತಿಯ ರಾಜಬೀದಿ ಉತ್ಸವ ಹೊಸನಗರ ರಸ್ತೆಯ ನೆಹರು ಬಡಾವಣೆ ಸಮೀಪ ಆಗಮಿಸುತಿದ್ದಂತೆ ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ , ಈದ್ ಮಿಲಾದ್ ಸಮಿತಿ , ಮೆಕ್ಕಾ ಮಸೀದಿ , ಅಲ್ ಬದ್ರಿಯಾ ಮಸೀದಿ , ಎಸ್ ಎಸ್ ಎಫ಼್ ಹಾಗೂ ಸಮಸ್ಥ ಮುಸ್ಲಿಂ ಬಾಂಧವರ ವತಿಯಿಂದ ಶ್ರೀ ಸ್ವಾಮಿಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಭಕ್ತಾಧಿಗಳಿಗೆ ಸಿಹಿ ಹಾಗೂ ತಂಪು ಪಾನೀಯ ಹಂಚಿ ಗಣಪತಿಗೆ ಮಾಲಾರ್ಪಣೆ ಮಾಡುವ ಮೂಲಕ ಸೌಹಾರ್ಧ ಮೆರೆದರು.

ಕೇವಲ ಆಹಾರ – ಪಾನೀಯ ವಿತರಿಸುವುದರಲ್ಲಿ ಮಾತ್ರ ಸೀಮಿತವಾಗದೇ, ಧರ್ಮಭಾವನೆಯನ್ನು ಮೀರಿದ ಸಹೋದರತ್ವದ ಭಾವನೆ ಇಲ್ಲಿ ಗೋಚರಿಸಿತು. ಮುಸ್ಲಿಂ ಸಮಾಜದ ಯುವಕರು ಹಾಗೂ ಸಂಘ ಸಂಸ್ಥೆಗಳ ಸದಸ್ಯರು ತಮ್ಮದೇ ಆದ ಉತ್ಸಾಹದಿಂದ ಈ ಕಾರ್ಯದಲ್ಲಿ ತೊಡಗಿದ್ದರು. ಅವರು ಭಕ್ತರ ಮೇಲೆ ಹೃದಯಸ್ಪರ್ಶಿ ಆತಿಥ್ಯ ತೋರಿದ ರೀತಿಯು ಹಾಜರಿದ್ದ ಎಲ್ಲರ ಗಮನ ಸೆಳೆಯಿತು.

ಇಂತಹ ಸೌಹಾರ್ಧದ ದೃಶ್ಯಗಳು ರಿಪ್ಪನ್ ಪೇಟೆಯಲ್ಲಿ ಹೊಸದಲ್ಲ. ಕಳೆದ ವರ್ಷವೂ ಗಣಪತಿಯ ರಾಜಬೀದಿ ಉತ್ಸವದ ಸಂದರ್ಭದಲ್ಲಿ ಪಟ್ಟಣದ ಮುಸ್ಲಿಂ ಯುವಕರು ಭಕ್ತರಿಗೆ ತಂಪು ಪಾನೀಯ ವಿತರಿಸಿದ್ದರು. ಅದೇ ರೀತಿಯಲ್ಲಿ, ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಹಿಂದೂ ಯುವಕರು ಮುಸ್ಲಿಂ ಬಾಂಧವರಿಗೆ ತಂಪು ಪಾನೀಯ ಹಾಗೂ ಉಪಹಾರ ಹಂಚುವ ಮೂಲಕ ಧಾರ್ಮಿಕ ಸೌಹಾರ್ಧದ ಗಟ್ಟಿಯಾದ ಸಂದೇಶವನ್ನು ನೀಡಿದ್ದರು. ಈ ಸಾಂಪ್ರದಾಯಿಕ ವಿನಿಮಯವೇ ಸಮಾಜದಲ್ಲಿ ಶಾಂತಿ, ಸಹಕಾರ ಹಾಗೂ ಸ್ನೇಹಾಭಿವೃದ್ಧಿಗೆ ದಾರಿ ಮಾಡಿಕೊಡುತ್ತಿದೆ.

ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರಾಜಬೀದಿ ಉತ್ಸವವು ಕೇವಲ ಧಾರ್ಮಿಕ ಆಚರಣೆಗಷ್ಟೇ ಸೀಮಿತವಾಗದೇ, ಸಮಾನತೆಯ, ಬಾಂಧವ್ಯದ ಹಾಗೂ ಸಹಬಾಳ್ವೆಯ ಉತ್ಸವವಾಗಿಯೂ ಬೆಳಗಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತಾದಿಗಳು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಧಾರ್ಮಿಕ ಸಮಿತಿಗಳು ಎಲ್ಲರೂ ಒಟ್ಟಾಗಿ ಈ ಉತ್ಸವವನ್ನು ಸ್ಮರಣೀಯವಾಗಿಸಲು ಕಾರಣರಾದರು.

ಸರ್ವಧರ್ಮ ಸೌಹಾರ್ಧದ ಹಾದಿಯಲ್ಲಿ ಸಾಗುತ್ತಿರುವ ರಿಪ್ಪನ್ ಪೇಟೆ ಪಟ್ಟಣ, ಸಾಮಾಜಿಕ ಐಕ್ಯತೆಗಾಗಿ ಮತ್ತೊಮ್ಮೆ ಮಾದರಿಯಾಗಿದೆ.

ಈ ಸಂಧರ್ಭದಲ್ಲಿ ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ ಬ್ಯಾರಿ, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರಸೇನಾ ಸಮಿತಿ ಅಧ್ಯಕ್ಷ ಸುಧೀರ್ ಪಿ ,ಕಾರ್ಯದರ್ಶಿ ಮುರುಳಿ ಕೆರೆಹಳ್ಳಿ ಮುಖಂಡರಾದ ಅರ್ ಎ ಚಾಬುಸಾಬ್ , ಎಂ ಬಿ ಮಂಜುನಾಥ್ , ಆಸೀಫ಼್ ಭಾಷಾ, ನಿರೂಪ್ ಕುಮಾರ್ , ಹಸನಾರ್ ,ರವೀಂದ್ರ ಕೆರೆಹಳ್ಳಿ , ರಾಮಚಂದ್ರ ಬಳೆಗಾರ್ ,ಅಫ಼್ಜಲ್ ಬ್ಯಾರಿ , ಅಕ್ಬರ್ , ಮೈದಿನ್ ಆರ್ ಹೆಚ್ ಹಾಗೂ ಇನ್ನಿತರರು ಇದ್ದರು.

Exit mobile version