Headlines

ಸಾಗರದ ಜನ್ನತ್ ಗಲ್ಲಿ ಗಣಪನ ವಿಸರ್ಜನೆ ವೇಳೆ ಅಹಿತಕರ ಘಟನೆ – ಮುಸ್ಲಿಂ ಮುಖಂಡರಿಂದ ವಿಷಾದ , ಸೌಹಾರ್ಧ ಕಾಪಾಡಿದ ಪೊಲೀಸರ ಕ್ರಮ

ಸಾಗರದ ಜನ್ನತ್ ಗಲ್ಲಿ ಗಣಪನ ವಿಸರ್ಜನೆ ವೇಳೆ ಅಹಿತಕರ ಘಟನೆ – ಮುಸ್ಲಿಂ ಮುಖಂಡರಿಂದ ವಿಷಾದ , ಸೌಹಾರ್ಧ ಕಾಪಾಡಿದ ಪೊಲೀಸರ ಕ್ರಮ

ಸಾಗರದ ಜನ್ನತ್ ಗಲ್ಲಿ ಗಣಪನ ವಿಸರ್ಜನೆ ವೇಳೆ ಅಹಿತಕರ ಘಟನೆಯೊಂದು ನಡೆದು ಕೆಲಕಾಲ ಬಿಗುವಿನಿಂದ ಕೂಡಿದ ವಾತಾವರಣ ಉಂಟಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮುಸ್ಲಿಂ ಸಮಾಜದ ಮುಖಂಡರಿಂದ ವಿಷಾದ ಹಾಗೂ ಪೊಲೀಸರಿಂದ ಸಕಾಲಿಕ ಕಾನೂನು ಕ್ರಮ ಜರುಗಿಸುವ ಭರವಸೆ ಹಿನ್ನೆಲೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಗಣಪತಿಯ ವಿಸರ್ಜನೆ ಮಾಡಿರುವ ಘಟನೆ ನಡೆದಿದೆ.

ಕೋಮು ಸೂಕ್ಷ್ಮ ಮಲೆನಾಡಿನ ಸಾಗರ ನಗರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಅಹಿತಕರ ಘಟನೆಯೊಂದು ನಡೆದು ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು. ಸಾಗರದ ಜನ್ನತ್ ಗಲ್ಲಿ ಬಡಾವಣೆಯಲ್ಲಿ ಜೈ ಭುವನೇಶ್ವರಿ ಸಂಘ ಸ್ಥಾಪಿಸಿದ ಗಣೇಶನ ವಿಸರ್ಜನಾ ಮೆರವಣಿಗೆ ಸಾಗುವಾಗ ಮಾರ್ಗ ಮಧ್ಯದಲ್ಲಿ ನಡೆದ ಅಹಿತಕರ ಘಟನೆಯಿಂದ ಗಣೇಶನಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಗಣೇಶನ ಮೆರವಣಿಗೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಾಗರದ ಎಎಸ್ಪಿ ಬೆನಕ ಪ್ರಸಾದ್ ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಮಧ್ಯೆ ತೀವ್ರ ವಾಗ್ವಾದ ನಡೆಯಿತು.

ಗಣಪತಿ ಮೆರವಣಿಗೆ ವೇಳೆ ಅನ್ಯಕೋಮಿನವರಿಂದ ನಡೆದ ಪ್ರಮಾದಕ್ಕೆ ಕ್ಷಮೆ ಯಾಚಿಸಬೇಕು. ಕಾನೂನು ಕ್ರಮ ಜರಗಿಸಬೇಕು ಇಲ್ಲದಿದ್ದರೆ ಗಣಪತಿಯನ್ನು ವಿಸರ್ಜನೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಸಕಾಲಿಕ ಕ್ರಮ ಜರುಗಿಸದಿದ್ದಲ್ಲಿ ಪುನರಾವರ್ತನೆ ಯಾಗಲಿದೆ ಎಂಬ ಎಚ್ಚರಿಕೆಯನ್ನು ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು

ಇನ್ನು ಜೈ ಭುವನೇಶ್ವರಿ ಸಂಘಟನೆಯ ಜನ್ನತ್ ಗಲ್ಲಿ ಗಣಪನ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಹರತಾಳ ಹಾಲಪ್ಪ ಬೆಂಬಲಿಗರೊಂದಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ

ಅಹಿತಕರ ಘಟನೆ ಬೆನ್ನಲ್ಲೇ ಅಂಜುಮನ್ ಎ ಸಾಗರ್ ಕಮಿಟಿ ಅಧ್ಯಕ್ಷ ಸೈಯದ್ ಇಕ್ಬಾಲ್ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ತಿಳಿದು ತಿಳಿಯದಂತೆ ತಪ್ಪು ನಡೆದಿದೆ. ಎಲ್ಲಾರು ಸೌಹಾರ್ದತೆಯಿಂದ ಬಾಳೋಣ. ಹಿಂದಿನಿಂದಲೂ ಸಾಗರದಲ್ಲಿ ಶಾಂತಿಯುತವಾಗಿ ಗಣಪತಿ ಮೆರವಣಿಗೆ ನಡೆದಿದೆ. ಮುಂದೆಯೂ ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ನಾವೆಲ್ಲ ಕಟಿಬದ್ದರಾಗಿದ್ದೇವೆ ಎಂದು ಹೇಳುವ ಮೂಲಕ ಕೋಮು ಸೌಹಾರ್ದತೆಗೆ ನಾಂದಿ ಹಾಡಿದ್ದಾರೆ

ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಅಹಿತಕರ ಘಟನೆ ನಡೆದ ಹಿನ್ನೆಲೆ ಎಸ್ಪಿ ಮಿಥುನ್ ಕುಮಾರ್ ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಲ್ಲದೆ ಘಟನೆ ಸಂಬಂಧ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದು ಸಂಬಂಧಪಟ್ಟವರು ಕ್ಷಮೆ ಯಾಚಿಸಿದ್ದಾರೆ . ಪೋಲಿಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.

ಒಟ್ಟಿನಲ್ಲಿ ಸಾಗರದ ಜನ್ನತ್ ಗಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಅಪಮಾನಕರ ಘಟನೆ ಯಿಂದ ಉಂಟಾಗಿದ್ದ ಬಿಗುವಿನ ವಾತಾವರಣ ಪೊಲೀಸರ ಸಕಾಲಿಕ ಕ್ರಮದಿಂದ ಪರಿಸ್ಥಿತಿ ತಿಳಿಯಾಗಿದ್ದು ಗಣೇಶನ ವಿಸರ್ಜನೆ ನಿರ್ವಿಘ್ನವಾಗಿ ನಡೆದಿದೆ

Exit mobile version