ಅಡ್ಡೇರಿ ಸರ್ಕಾರಿ ಶಾಲೆ ಕುಸಿತ – ತಪ್ಪಿದ ಭಾರಿ ಅನಾಹುತ, ಮಕ್ಕಳಿಗೆ ತಾತ್ಕಾಲಿಕ ವ್ಯವಸ್ಥೆ ಅಗತ್ಯ
ರಿಪ್ಪನ್ ಪೇಟೆ : ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡ್ಡೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆಗಳು ಕುಸಿದು ಬಿದ್ದಿವೆ.
ಘಟನೆ ಸೋಮವಾರ ರಾತ್ರಿ ನಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 17 ವಿದ್ಯಾರ್ಥಿಗಳ ಭಾರಿ ಅನಾಹುತದಿಂದ ಪಾರಾಗಿದ್ದಾರೆ.
ಶಾಲೆಯ ಕಟ್ಟಡ ಸಂಪೂರ್ಣ ಹಾನಿಗೊಳಗಾದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಮುಖ್ಯಶಿಕ್ಷಕರ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಪಾಠಕ್ಕೆ ಹಾಜರಾಗುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಓದಲು ಸೂಕ್ತ ಪರಿಸರವೇ ಇಲ್ಲದಂತಾಗಿದೆ. ಪೋಷಕರು ಮತ್ತು ಗ್ರಾಮಸ್ಥರು ಈ ಕುರಿತು ತೀವ್ರ ಆತಂಕ ವ್ಯಕ್ತಪಡಿಸಿ, ತುರ್ತು ಆಧಾರದ ಮೇಲೆ ಮಕ್ಕಳಿಗೆ ಸುರಕ್ಷಿತ ತರಗತಿ ಕೊಠಡಿ ಕಲ್ಪಿಸುವಂತೆ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.
ಘಟನೆ ನಂತರ ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲೆಗೆ ಶೀಘ್ರದಲ್ಲೇ ಮರುಕಟ್ಟಡ ನಿರ್ಮಾಣ ಮಾಡಬೇಕೆಂದು ಅವರು ಭರವಸೆ ನೀಡಿದ್ದಾರೆ.