RIPPONPETE | ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾಗಿ ಅಫ಼್ಜಲ್ ಬ್ಯಾರಿ , ಕಾರ್ಯದರ್ಶಿಯಾಗಿ ಮಿಸ್ಸಾಬ್ ಆಯ್ಕೆ
ರಿಪ್ಪನ್ ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಆಶ್ರಯದಲ್ಲಿ ಆಯೋಜಿಸಲಾಗುವ ಈದ್ ಮಿಲಾದ್ ಕಾರ್ಯಕ್ರಮದ 2025ನೇ ಸಾಲಿನ ಸಮಿತಿಗೆ ನೂತನ ಅಧ್ಯಕ್ಷರಾಗಿ ಅಫ಼್ಜಲ್ ಬ್ಯಾರಿ ಮತ್ತು ಕಾರ್ಯದರ್ಶಿಯಾಗಿ ಮಿಸ್ಸಾಬ್ ಅವರನ್ನು ಆಯ್ಕೆ ಮಾಡಲಾಗಿದೆ.
ಶುಕ್ರವಾರ ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಆವರಣದಲ್ಲಿ ಮಸೀದಿ ಸಮಿತಿಯ ಅಧ್ಯಕ್ಷ ಹಸನಬ್ಬ ಬಾವಬ್ಯಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.
ಪ್ರತಿವರ್ಷ ರಿಪ್ಪನ್ ಪೇಟೆಯಲ್ಲಿ ಈದ್ ಮಿಲಾದ್ ಸಂಭ್ರಮವನ್ನು ನಾಲ್ಕು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಹಮ್ಮದ್ ಪೈಗಂಬರ್ ರವರ ಹುಟ್ಟುಹಬ್ಬದ ನೆನಪಿಗಾಗಿ ವಿಶ್ವದಾದ್ಯಂತ ನಡೆಯುವ ಈ ಆಚರಣೆ, ರಿಪ್ಪನ್ ಪೇಟೆಯಲ್ಲಿಯೂ ಭಕ್ತಿಭಾವಪೂರ್ಣವಾಗಿ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗುತ್ತದೆ.
ಈ ವರ್ಷದ ಈದ್ ಮಿಲಾದ್ ಕಾರ್ಯಕ್ರಮವನ್ನು ಇನ್ನಷ್ಟು ಭಾವಪೂರ್ಣವಾಗಿ ನಡೆಸುವ ಉದ್ದೇಶದಿಂದ ನೂತನ ಸಮಿತಿಯನ್ನು ರಚಿಸಲಾಗಿದೆ. ಸಮಾರಂಭದ ಯೋಜನೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಆಯ್ಕೆ ಹಾಗೂ ಸಾರ್ವಜನಿಕ ಸಹಭಾಗಿತ್ವ ಹೆಚ್ಚಿಸುವ ಬಗ್ಗೆ ಸಮಿತಿಯು ಚಿಂತನೆ ಆರಂಭಿಸಿದೆ.
ಈ ಸಭೆಯಲ್ಲಿ ಧರ್ಮಗುರುಗಳು, ಮುಖಂಡರು, ಯುವಕರು ಹಾಗೂ ಸಮುದಾಯದ ಹಿರಿಯರು ಭಾಗವಹಿಸಿದ್ದರು.