ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಸಂತೆ ಮಾರ್ಕೆಟ್ ಬಳಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಮದೀನಾ ಕಾಲೋನಿ ನಿವಾಸಿ ತನ್ವೀರ್ ಬಂಧಿತ ಆರೋಪಿಯಾಗಿದ್ದಾನೆ.ಈತನಿಗೆ ಇತ್ತೀಚೆಗೆ ಗಾಂಜಾ ಸೇವನೆ ಆರೋಪದಡಿಯಲ್ಲಿ ಬಂಧಿಸಲಾಗಿದ್ದ ಸಿದ್ದಪ್ಪನಗುಡಿ ನಿವಾಸಿ ಸಿದ್ದೇಶ್ ಗಾಂಜಾ ನೀಡಿರುವುದಾಗಿ ತನಿಖೆ ವೇಳೆಯಲ್ಲಿ ಆರೋಪಿ ಒಪ್ಪಿಕೊಂಡಿರುವ ಹಿನ್ನಲೆಯಲ್ಲಿ ಸಿದ್ದೇಶ್ ಮೇಲೆ ಪ್ರಕರಣ ದಾಖಲಾಗಿದೆ.
ವೈದ್ಯಕೀಯ ಪರೀಕ್ಷೆಯಿಂದ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವ ಹಿನ್ನಲೆಯಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.
ಘಟನೆಯ ಹಿನ್ನಲೆ :
ನಿನ್ನೆಯ ದಿನ ಸಂತೆ ಮಾರ್ಕೆಟ್ ಬಳಿ ರಿಪ್ಪನ್‌ಪೇಟೆ ಪೊಲೀಸರು ಗಸ್ತು ಸಂಚರಿಸುತ್ತಿರುವಾಗ ರಾತ್ರಿ 08-45 ಗಂಟೆ ವೇಳೆಗೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವನನ್ನು ಕಂಡು ಆತನ ಬಳಿ ಹೋಗಿ ಆತನನ್ನು ವಿಚಾರಿಸಿದ್ದಾರೆ.
ಈ ಸಮಯದಲ್ಲಿ ಆರೋಪಿಯ ಮಾತು ತೊದಲುತ್ತಿದ್ದು, ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಆತನನ್ನು ಕೂಲಂಕುಷವಾಗಿ ವಿಚಾರಸಿದಾಗ ಆತನು ಬೀಡಿ ಜೊತೆ ಗಾಂಜಾ ಸೇರಿಸಿ ಸೇದಿದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಗಾಂಜಾ ಸೇದಲು ಸಿದ್ದಪ್ಪನಗುಡಿ ನಿವಾಸಿ ಸಿದ್ದೇಶ್ ಬಳಿ ಗಾಂಜಾ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಕೂಡಲೇ ಆತನನ್ನು ವೈದ್ಯಕೀಯ ತಪಾಸಣೆಗೆ ಮೆಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು, ಆತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವೈದಕೀಯ ಪರೀಕ್ಷೆಯಿಂದ ದೃಡಪಟ್ಟಿರುವುದರಿಂದ ಈತನ ವಿರುದ್ಧ ಮಾದಕ ದ್ರವ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.ಸಿದ್ದೇಶ್ ಮೇಲೂ ಮಾದಕ ದ್ರವ್ಯ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್