ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಒಂದೇ ಕುಟುಂಬದ ಮೂವರು, ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗ ನಗರದ ಓ.ಟಿ. ರಸ್ತೆಯ ಕ್ಲಾರ್ಕ್ ಪೇಟೆಯಲ್ಲಿ ನಡೆದಿದೆ.
ಭುವನೇಶ್ವರಿ (41), ಇವರ ಮಗ ದರ್ಶನ್ (21) ಹಾಗೂ ಸಹೋದರ ಮಾರುತಿ (37) ಆತ್ಮಹತ್ಯೆಗೆ ಶರಣಾದವರೆಂದು ಗುರುತಿಸಲಾಗಿದೆ. ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಭುವನೇಶ್ವರಿ ಸ್ಥಳೀಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಸಹೋದರ ಮಾರುತಿ ಅನಾರೋಗ್ಯದಿಂದಾಗಿ ಮನೆಯಲ್ಲಿದ್ದರು. ಮಗ ದರ್ಶನ್ ಗುಜರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಭುವನೇಶ್ವರಿ ಹಾಗೂ ದರ್ಶನ್ ಕಳೆದೆರಡು ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ. ಭುವನೇಶ್ವರಿ ಸಹೋದರ ಶಿವಕುಮಾರ್ ಅವರ ಮನೆಗೆ ದರ್ಶನ್ ಉಪಹಾರಕ್ಕೆ ಹೋಗಿರಲಿಲ್ಲ. ಇದರಿಂದ ಇಂದು ಶಿವ ಕುಮಾರ್, ಭುವನೇಶ್ವರಿ ಅವರ ಮನೆಗೆ ಬಂದು ನೋಡಿದಾಗ ಮನೆ ಬಾಗಿಲು ಹಾಕಿತ್ತು. ನಂತರ ಕಿಟಕಿ ಮೂಲಕ ನೋಡಿದಾಗ ಎಲ್ಲರೂ ಮಲಗಿದ ಸ್ಥಿತಿಯಲ್ಲಿದ್ದರು. ಶಿವಕುಮಾರ್ ಸಾಕಷ್ಟು ಕೂಗಿದರೂ ಯಾರು ಮೇಲೇಳಲಿಲ್ಲ. ಇದರಿಂದ ಗಾಬರಿಗೊಂಡು ಬಾಗಿಲು ಒಡೆದು ನೋಡಿದಾಗ ಎಲ್ಲರೂ ಸಾವನ್ನಪ್ಪಿದ್ದು ಗೊತ್ತಾಗಿದೆ.
ಈ ಕುರಿತು ಸಹೋದರ ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, “ಕಳೆದ ಎರಡು ದಿನದಿಂದ ನಮ್ಮ ಅಕ್ಕ ಹಾಗೂ ಅಳಿಯ ಇಬ್ಬರೂ ಸಹ ಫೋನ್ ರಿಸಿವ್ ಮಾಡಿರಲಿಲ್ಲ. ಹೀಗಾಗಿ ನಾನು ಇಂದು ಬೆಳಗ್ಗೆ ಬಂದು ನೋಡಿದಾಗ ಎಲ್ಲರೂ ಮಲಗಿದ ಸ್ಥಿತಿಯಲ್ಲಿದ್ದರು. ನಂತರ ಬಾಗಿಲು ಒಡೆದು ನೋಡಿದಾಗ ಸಾವನ್ನಪ್ಪಿದ್ದು ಗೊತ್ತಾಯಿತು. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆಂದು ತಿಳಿದು ಬಂದಿಲ್ಲ. ನಮ್ಮ ಅಕ್ಕ ಎರಡು ಸಂಘದಲ್ಲಿದ್ದರು. ಸಾಲಕ್ಕೆ ಹೆದರಿ ಅವರು ಸಾವನ್ನಪ್ಪಿರುವ ಸಾಧ್ಯತೆ ಇಲ್ಲ” ಎಂದು ತಿಳಿಸಿದರು.

Leave a Reply
Cancel reply