ರಿಪ್ಪನ್ ಪೇಟೆ: ರಾಜ್ಯದ ಬಿಜೆಪಿ ಸರಕಾರದ ಆಡಳಿತ ಕಳಪೆಯಾಗಿದ್ದು ಜನಸಾಮಾನ್ಯರ ಬದುಕು ದುಸ್ತರವಾಗಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲ್ಲರಿಗೂ ಭಾವ ಅನ್ನೋ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಉತ್ತಮ ಆಡಳಿತವನ್ನು ನೀಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಟ್ಟಣದಲ್ಲಿ ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೆಲೆ ಏರಿಕೆಯಿಂದ ರಾಜ್ಯದಲ್ಲಿ ಜನಸಾಮಾನ್ಯರ ಬದುಕುವುದು ದುಸ್ತರವಾಗಿದೆ. ಕೂಲಿ ಕಾರ್ಮಿಕರು ಬಡವರು ಹಾಗೂ ಮಧ್ಯಮವರ್ಗದವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಕ್ಕೆ ಪ್ರತಿನಿತ್ಯ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಪ್ರತಿಭಾವಂತರು ಅವಕಾಶ ವಂಚಿತರಾಗುತ್ತಿದ್ದಾರೆ:
ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಹಗರಣಗಳು ನಡೆಯುತ್ತಿದ್ದು ಭ್ರಷ್ಟಾಚಾರ ರಾಜ್ಯದ ಮೂಲೆಮೂಲೆಯಲ್ಲೂ ತಾಂಡವಾಡುತ್ತಿದೆ. ಕಾಮಗಾರಿ ಗುತ್ತಿಗೆ. ಉಪನ್ಯಾಸಕರ ನೇಮಕಾತಿ. ಪಿಎಸ್ಐ ನೇಮಕಾತಿ ಹೀಗೆ ಪ್ರತಿಯೊಂದರಲ್ಲೂ ಯಾವುದೇ ಸರಕಾರದ ನೇಮಕಾತಿ ನಡೆದರೂ ಹಗರಣಗಳ ಹೊಗೆಯಾಡುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ಬಡ ಮಕ್ಕಳು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಅಂಕಗಳನ್ನು ಗಳಿಸಿದ್ದರು ಸಹ ಸರ್ಕಾರಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ.
ರಾಜ್ಯದ ಗೃಹ ಮಂತ್ರಿ ಆರಗ ಜ್ಞಾನೇಂದ್ರ ರವರಿಗೆ ಗೃಹಖಾತೆ ಕೂಡಿ ಬರುವುದಿಲ್ಲ. ಪ್ರತಿನಿತ್ಯ ಒಂದಲ್ಲ ಒಂದು ಹಗರಣಗಳು ಮತ್ತು ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿದ್ದು. ರಾಜ್ಯದ ಜನತೆ ಗೃಹ ಖಾತೆಯ ಮಂತ್ರಿಗಳ ಬಗ್ಗೆ ಬೇಸರವನ್ನು ಹೊಂದಿದ್ದಾರೆ.ಈ ಕೂಡಲೇ ಅವರನ್ನು ಗೃಹ ಖಾತೆಯಿಂದ ಬದಲಾಯಿಸಬೇಕೆಂದು ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಸಾಗರ ಕ್ಷೇತ್ರದ ಶಾಸಕರು ಇನ್ನೂ ದಿನಗಳ ಲೆಕ್ಕಾಚಾರ ಮಾಡಬೇಕು :
ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ಇಂದಿಗೆ ನಾಲ್ಕು ವರ್ಷಗಳ ಅವಧಿಯನ್ನು ಮುಗಿಸಿದ್ದು ಇನ್ನು ಕೇವಲ ಒಂದು ವರ್ಷ ಬಾಕಿ ಇದ್ದು. ಈಗಿನ ರಾಜ್ಯದ ಬಿಜೆಪಿ ಆಡಳಿತ ಸರ್ಕಾರದ ಕಾರ್ಯವೈಖರಿಯನ್ನು ನೋಡಿದರೆ ಇನ್ನು ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಘೋಷಣೆ ಮಾಡಬಹುದು. ಹಾಲಿ ಶಾಸಕರು ನಾಳೆಯಿಂದ ಇನ್ನುಳಿದ ಅಧಿಕಾರದ ಅವಧಿಯನ್ನು ದಿನಗಳ ಲೆಕ್ಕಾಚಾರದಲ್ಲಿ ಮಾಡಬೇಕು.ಈ ಬಾರಿ ಸಾಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಮಾಕರ್, ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಬೆದುಲ್ಲಾ ಶರೀಫ್. ಕೆಂಚನಾಲ ಗ್ರಾಮ ಪಂಚಾಯಿತಿ ಸದಸ್ಯ ಮಹಮ್ಮದ್ ಶರೀಫ್.ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಆಸಿಫ್ ಭಾಷಾಸಾಬ್,ಅಶೋಕ್ ಬೇಳೂರು,ರಾಮಚಂದ್ರ ಸೇರಿದಂತೆ ಇನ್ನಿತರರು ಇದ್ದರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್