Headlines

ತಲೆಗೆ ಮಚ್ಚಿನಿಂದ ಹಲ್ಲೆ ಮಾಡಿ ಮಹಿಳೆ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ

ತಲೆಗೆ ಮಚ್ಚಿನಿಂದ ಹಲ್ಲೆ ಮಾಡಿ ಮಹಿಳೆ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ

A Shivamogga court has sentenced a 25-year-old man to life imprisonment and imposed a ₹50,000 fine for the 2020 murder of a woman over a land dispute in Soraba taluk, Shivamogga district.

ಸೊರಬ: ಜಾಗದ ವಿಚಾರವಾಗಿ ಉಂಟಾದ ವಿವಾದದಲ್ಲಿ ಮಹಿಳೆಯೊಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣದ ಆರೋಪಿಗೆ ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಿವಮೊಗ್ಗದ 5ನೇ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಆರ್. ಅವರು ಪ್ರಕರಣದ ವಿಚಾರಣೆ ನಡೆಸಿ, ಆರೋಪಿ ಮಂಜುನಾಥ (25) ಅವರಿಗೆ ಜೀವಾವಧಿ ಶಿಕ್ಷೆಯೊಂದಿಗೆ ₹50,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಈ ಘಟನೆ 2020ರ ಆಗಸ್ಟ್ 25ರಂದು ಸೊರಬ ತಾಲೂಕಿನ ಸಮನವಳ್ಳಿ ಆನವಟ್ಟಿ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ನಿವಾಸಿ ರಾಜೇಶ್ವರಿ (35) ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮನೆಯ ಮುಂಭಾಗದಲ್ಲಿ ಕುಳಿತಿದ್ದ ವೇಳೆ, ಅದೇ ಗ್ರಾಮದ ಮಂಜುನಾಥ ಜಾಗದ ವಿಚಾರವಾಗಿ ಜಗಳ ಆರಂಭಿಸಿದ್ದಾನೆ.

ಈ ವೇಳೆ ರಾಜೇಶ್ವರಿ ಅವರು ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಕ್ಕೆ ಆಕ್ರೋಶಗೊಂಡ ಆರೋಪಿ ಮಚ್ಚಿನಿಂದ ತಲೆಗೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ರಾಜೇಶ್ವರಿ ಸ್ಥಳದಲ್ಲೇ ಮೃತಪಟ್ಟಿದ್ದರು.

ಪ್ರಕರಣ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 302 (ಕೊಲೆ) ಹಾಗೂ 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಅಂದಿನ ಸೊರಬ ವೃತ್ತದ ಸಿಪಿಐ ಆರ್.ಡಿ. ಮರುಳಸಿದ್ದಪ್ಪ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಅಣ್ಣಪ್ಪ ನಾಯಕ ವಾದ ಮಂಡಿಸಿದ್ದರು.

ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

About The Author

Exit mobile version