17 ವರ್ಷಗಳ ಬಳಿಕ ಮಹಾರಾಜ ಟ್ರೋಫಿ ಶಿವಮೊಗ್ಗದ ಮಡಿಲಿಗೆ: ಶಿವಮೊಗ್ಗ ಯೋಧಾಸ್‌ಗೆ ಅದ್ದೂರಿ ಸನ್ಮಾನ
Shivamogga Yodhas received a grand felicitation after winning the Maharaja Trophy (KPL) for the first time in 17 years. The team was honored at KSCA Navule Stadium, and CEO Mithun donated ₹5 lakh to late cricketer Akshay’s family.
ಶಿವಮೊಗ್ಗ, ಜು. 21: 17 ವರ್ಷಗಳ ಬಳಿಕ ಮಹಾರಾಜ ಟ್ರೋಫಿ (ಕೆಪಿಎಲ್) ಗೆದ್ದಿರುವ ಶಿವಮೊಗ್ಗ ಯೋಧಾಸ್ ತಂಡಕ್ಕೆ ನವುಲೆಯ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ಅದ್ದೂರಿ ಅಭಿನಂದನಾ ಸಮಾರಂಭ ಆಯೋಜಿಸಲಾಯಿತು. ಜಿಲ್ಲೆಯ ನೂರಾರು ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ಆಟಗಾರರನ್ನು ಸನ್ಮಾನಿಸಿ ಅವರ ಸಾಧನೆಯನ್ನು ಕೊಂಡಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್. ಅರುಣ್, ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳ ಬಹುಕಾಲದ ಕನಸು ಈಡೇರಿದ್ದು, ಶಿವಮೊಗ್ಗ ಯೋಧಾಸ್ ತಂಡದ ಸಿಇಓ ಮಿಥುನ್ ಹಾಗೂ ಆಟಗಾರರ ಪರಿಶ್ರಮವೇ ಈ ಐತಿಹಾಸಿಕ ಸಾಧನೆಗೆ ಕಾರಣವಾಗಿದೆ ಎಂದು ಹೇಳಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯದ ಬಲಿಷ್ಠ ತಂಡಗಳನ್ನು ಮಣಿಸಿ ಮಹಾರಾಜ ಟ್ರೋಫಿಯನ್ನು ಗೆದ್ದಿರುವುದು ಜಿಲ್ಲೆಯ ಹೆಮ್ಮೆ. ಈ ಸಾಧನೆ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಐದು ಬಲಿಷ್ಠ ತಂಡಗಳನ್ನು ಸೋಲಿಸಿ ಚಾಂಪಿಯನ್ ಆಗಿರುವ ಶಿವಮೊಗ್ಗ ಯೋಧಾಸ್ ತಂಡದ ಎಲ್ಲಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯನ್ನು ಮೈಸೂರು ಪೇಟ ತೊಡಿಸಿ ಗೌರವಿಸಲಾಯಿತು. ಈ ವೇಳೆ ಆಟಗಾರರು ಟ್ರೋಫಿಯನ್ನು ಎತ್ತಿಹಿಡಿದು ಸಂಭ್ರಮಿಸಿದರು.
ಸಮಾರಂಭದ ವಿಶೇಷ ಕ್ಷಣವಾಗಿ, ಮಹಾರಾಜ ಟ್ರೋಫಿ ಗೆಲುವಿನ ಬಹುಮಾನ ಮೊತ್ತವಾದ ₹15 ಲಕ್ಷದಲ್ಲಿ ₹5 ಲಕ್ಷವನ್ನು ರಣಜಿ ಪಂದ್ಯಗಳಲ್ಲಿ ಶಿವಮೊಗ್ಗವನ್ನು ಪ್ರತಿನಿಧಿಸಿದ್ದ ಹಾಗೂ ಕ್ರಿಕೆಟ್ ಆಡುತ್ತಿದ್ದಾಗಲೇ ಹೃದಯಾಘಾತದಿಂದ ನಿಧನರಾದ ಕ್ರಿಕೆಟಿಗ ಅಕ್ಷಯ್ ಅವರ ಕುಟುಂಬಕ್ಕೆ ಶಿವಮೊಗ್ಗ ಯೋಧಾಸ್ ಸಿಇಓ ಮಿಥುನ್ ನೆರವಿನ ರೂಪದಲ್ಲಿ ನೀಡಿದರು. ಈ ನಡೆ ಕ್ರೀಡಾ ಕ್ಷೇತ್ರದಲ್ಲಿನ ಮಾನವೀಯತೆಗೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಸೂಡ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಜಿಲ್ಲಾ ಪಂಚಾಯಿತಿ ಸಿಇಓ ಹೇಮಂತ್ ಕುಮಾರ್, ಕೆಎಸ್‌ಸಿಎ ಶಿವಮೊಗ್ಗ ವಲಯ ಅಧ್ಯಕ್ಷ ನಾಗೇಂದ್ರ ಪಂಡಿತ್, ಸದಾನಂದ್, ಸುಕುಮಾರ್, ಐಡಿಯಲ್ ಗೋಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಗರದ ಬೆಕ್ಕಿನ ಕಲ್ಮಠದಿಂದ ತೆರೆದ ವಾಹನದಲ್ಲಿ ವಿಜೇತ ತಂಡದ ಮೆರವಣಿಗೆ ಆರಂಭವಾಗಿ ಬಿ.ಎಚ್. ರಸ್ತೆ, ನೆಹರೂ ರಸ್ತೆ, ದುರ್ಗಿಗುಡಿ ಮಾರ್ಗವಾಗಿ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ತಲುಪಿತು. ಮಾರ್ಗದುದ್ದಕ್ಕೂ ಅಭಿಮಾನಿಗಳು ಆಟಗಾರರಿಗೆ ಭರ್ಜರಿ ಸ್ವಾಗತ ಕೋರಿದರು.




