ರಿಪ್ಪನ್ಪೇಟೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ : ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆಶಾ ಕಾರ್ಯಕರ್ತೆಯರಿಗೆ ಗೌರವ
Ripponpet Rotary Club inducted its new office bearers for 2026-27. District Elect Governor Rtn. Vasanth Hobalidar stressed that social service is the true duty of humanity during the installation ceremony and merit awards function.
ರಿಪ್ಪನ್ಪೇಟೆ, ಜುಲೈ 6: ಸಮಾಜ ಸೇವೆಯ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಪರಸ್ಪರ ಸಹಕಾರದಿಂದ ಬದುಕುವುದೇ ನಿಜವಾದ ಮನುಷ್ಯ ಧರ್ಮ ಎಂದು ರೋಟರಿ ಜಿಲ್ಲಾ ಎಲೆಕ್ಟ್ ಗವರ್ನರ್ ರೊ. ವಸಂತ ಹೋಬಳಿದಾರ್ ಹೇಳಿದರು.
ಪಟ್ಟಣದ ಜಿಎಸ್ಬಿ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದ್ದ ರಿಪ್ಪನ್ಪೇಟೆ ರೋಟರಿ ಕ್ಲಬ್ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಸಾರ್ವಜನಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ರೋಟರಿ ಸೇವೆಯೇ ಶ್ರೇಷ್ಠ” ಎಂಬ ಧ್ಯೇಯವಾಕ್ಯವನ್ನು ಸ್ಮರಿಸಿದ ಅವರು, ನಿಸ್ವಾರ್ಥ ಸೇವೆಯಿಂದ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯವಾಗಿದ್ದು, ಅಗತ್ಯವಿರುವವರಿಗೆ ನೆರವಾಗುವುದೇ ರೋಟರಿ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ 2026-27ನೇ ಸಾಲಿನ ರೋಟರಿ ಕ್ಲಬ್ ಅಧ್ಯಕ್ಷರಾಗಿ ರೊ. ರವೀಂದ್ರ ಬಲ್ಲಾಳ್ ಕೆ. ಹಾಗೂ ಕಾರ್ಯದರ್ಶಿಯಾಗಿ ರೊ. ರಮೇಶ್ ಹೆಬ್ಬಾರ್ ಅಧಿಕಾರ ಸ್ವೀಕರಿಸಿದರು.
ಅಸಿಸ್ಟೆಂಟ್ ಗವರ್ನರ್ ರೊ. ಪಿಎಚ್ಎಫ್ ನಾಗರಾಜ್ ಎಸ್. ಮಾತನಾಡಿ, ರೋಟರಿ ಸಂಸ್ಥೆ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ವಿಶ್ವದ 220ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ರಿಪ್ಪನ್ಪೇಟೆ ರೋಟರಿ ಕ್ಲಬ್ ಕಳೆದ 16 ವರ್ಷಗಳಿಂದ ಶಿಕ್ಷಣ, ಆರೋಗ್ಯ ಮತ್ತು ಸಮಾಜಮುಖಿ ಸೇವೆಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಝೋನಲ್ ಲೆಫ್ಟಿನೆಂಟ್ ರೊ. ವಿಷ್ಣುಮೂರ್ತಿ ಎಸ್.ಎಂ. ಮಾತನಾಡಿ, ಗ್ಲೋಬಲ್ ಗ್ರಾಂಟ್ ಮೂಲಕ ಗ್ರಾಮೀಣ ಅಭಿವೃದ್ಧಿ, ಮಕ್ಕಳ ಶಿಕ್ಷಣ, ರಸ್ತೆ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತಾ ಕಾರ್ಯಕ್ರಮಗಳಿಗೆ ಈ ವರ್ಷ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ನೂತನ ಅಧ್ಯಕ್ಷ ರೊ. ರವೀಂದ್ರ ಬಲ್ಲಾಳ್ ಮಾತನಾಡಿ, ರಸ್ತೆ ಸುರಕ್ಷತಾ ಜಾಗೃತಿ, ಪರಿಸರ ಸಂರಕ್ಷಣೆ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ಆದ್ಯತೆ ನೀಡುವ ವಿವಿಧ ಜನಪರ ಕಾರ್ಯಕ್ರಮಗಳನ್ನು ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ರೋಟರಿ ಕ್ಲಬ್ ಆಯೋಜಿಸಿದ್ದ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಾದ ಪದ್ಮ, ನಗೀನಾ ಮತ್ತು ನಾಗವೇಣಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ರಾಜಾನಂದಿನಿ ಕಾಗೋಡು, ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ಲಕ್ಷ್ಮಣಗೌಡ, ಗಣೇಶ್ ಕಾಮತ್, ಜೆ. ರಾಧಾಕೃಷ್ಣ, ಡಾಕಪ್ಪ, ಮುಖ್ಯ ಶಿಕ್ಷಕ ರಾಧಾಕೃಷ್ಣ ಆರ್., ಎಂ.ಬಿ. ಮಂಜುನಾಥ್, ಸಬಾಸ್ಟಿನ್ ಮ್ಯಾಥ್ಯೂಸ್, ಶಿವಕುಮಾರ್ ಶೆಟ್ಟಿ, ಪ್ರಮೀಳಾ ಎಂ.ಬಿ. ಗೌಡ, ಪ್ರವೀಣೆ ಮಂಜುನಾಥ್, ಅಮೃತ್ ರಮೇಶ್, ಅಮಿತ್ ರವೀಂದ್ರ ಬಲ್ಲಾಳ್, ಸಂಧ್ಯಾ ಜಿ. ಕಾಮತ್, ದೀಪಾ ಸುದೀಂದ್ರ ಹೆಬ್ಬಾರ್, ಹೆಚ್.ಎಂ. ವರ್ತೇಶ್ ಗೌಡ ಸೇರಿದಂತೆ ರೋಟರಿ ಕ್ಲಬ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕೃಷ್ಣರಾಜ್ ಸ್ವಾಗತಿಸಿದರು. ಸಬಾಸ್ಟಿನ್ ಮ್ಯಾಥ್ಯೂಸ್ ಹಾಗೂ ಎಂ.ಬಿ. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಹೆಬ್ಬಾರ್ ವಂದಿಸಿದರು.




