ರಿಪ್ಪನ್ ಪೇಟೆ ಕೆನರಾ ಬ್ಯಾಂಕ್: ‘ಕನ್ನಡ್ ಗೊತ್ತಿಲ್ಲ’ ಎನ್ನುವ ಸಿಬ್ಬಂದಿಗಳಿಂದ ಅನ್ನದಾತನಿಗೆ ಅವಮಾನ – ಹಿಂದಿ ದಬ್ಬಾಳಿಕೆಗೆ ಭುಗಿಲೆದ್ದ ಜನಾಕ್ರೋಶ!
Public outrage erupts at Canara Bank in Ripponpet over alleged discrimination against Kannada-speaking farmers. Customers claim language barriers, loan delays, and demand immediate action from higher authorities.
ರಿಪ್ಪನ್ ಪೇಟೆ: ಬಾನಿನ ಮಳೆಯೂ ಕೈಕೊಟ್ಟು, ಬೆಳೆಯೂ ಇಲ್ಲದೆ ತುತ್ತು ಅನ್ನಕ್ಕೂ ಪರದಾಡುತ್ತಿರುವ ನಮ್ಮ ರೈತರಿಗೆ, ಕಷ್ಟಕಾಲದಲ್ಲಿ ಆಸರೆಯಾಗಬೇಕಾದ ಬ್ಯಾಂಕ್ ಅಧಿಕಾರಿಗಳೇ ಇದೀಗ ಬಹುದೊಡ್ಡ ಶಾಪವಾಗಿ ಪರಿಣಮಿಸಿದ್ದಾರೆ. ಇದು ನಮ್ಮ ನಾಡು, ನಮ್ಮ ಭಾಷೆ, ನಮ್ಮ ಬ್ಯಾಂಕು! ಆದರೂ, ರಿಪ್ಪನ್ ಪೇಟೆಯ ಕೆನರಾ ಬ್ಯಾಂಕ್‌ಗೆ ಹೋದರೆ ಕನ್ನಡಿಗರು ತಮ್ಮದೇ ನೆಲದಲ್ಲಿ, ತಮ್ಮದೇ ಊರಿನಲ್ಲಿ ಪರಕೀಯರಂತೆ ಭಿಕ್ಷುಕರ ಭಂಗಿಯಲ್ಲಿ ನಿಲ್ಲಬೇಕಾದ ಶೋಚನೀಯ ದುಸ್ಥಿತಿ ನಿರ್ಮಾಣವಾಗಿದೆ. ರೈತಾಪಿ ವರ್ಗ ಹಾಗೂ ಕಾರ್ಮಿಕ ವರ್ಗದವರನ್ನು ಇಲ್ಲಿನ ಕೆನರಾ ಬ್ಯಾಂಕ್ ನ ಸಿಬ್ಬಂದಿಗಳು ಅಲೆದಾಡಿಸುತ್ತಿರುವ ಪರಿ ನಿಜಕ್ಕೂ ಅಮಾನವೀಯ.
ಬಡ ಗ್ರಾಹಕರಿಗೆ ಮತ್ತು ರೈತರಿಗೆ ಸಾಲದ ಆಸೆ ತೋರಿಸಿ, ಅವರಿಂದ ಪ್ರಾಜೆಕ್ಟ್ ರಿಪೋರ್ಟ್ ಸೇರಿದಂತೆ ಎಲ್ಲಾ ರೀತಿಯ ದಾಖಲೆಗಳನ್ನು ಮಾಡಿಸಿಕೊಂಡು, ಕಚೇರಿಯಿಂದ ಕಚೇರಿಗೆ ದಿನಗಟ್ಟಲೆ ಅಲೆದಾಡಿಸಲಾಗುತ್ತದೆ. ಆದರೆ, ಕೊನೆ ಘಳಿಗೆಯಲ್ಲಿ “ನಮಗೆ ಕನ್ನಡ್ ಗೊತ್ತಿಲ್ಲ, ಲೋನ್‌ಗೆ ಅಪ್ರೂವಲ್ ಇಲ್ಲ” ಎಂದು ನಿರ್ದಾಕ್ಷಿಣ್ಯವಾಗಿ ಕೈಯೆತ್ತುತ್ತಿರುವ ಕಲ್ಲು ಹೃದಯದ ಕೆನರಾ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ತೀವ್ರ ಛೀಮಾರಿ ಹಾಕುತ್ತಿದ್ದಾರೆ. ಸಾಲ ಪಡೆಯಲು ನಮ್ಮ ರೈತರು ಹಿಂದಿ ಕಲಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಏನ್ರೀ ಇದು ದಬ್ಬಾಳಿಕೆ? ಇವರನ್ನು ಕೇಳೋರು ಯಾರು ಇಲ್ವಾ ಎಂಬ ಆಕ್ರೋಶ ಭುಗಿಲೆದ್ದಿದೆ. ಕನ್ನಡಿಗರ ದುಡ್ಡಿನಲ್ಲಿ ಸಂಬಳ ಪಡೆಯುವ ಇವರಿಗೆ ಕನ್ನಡಿಗರೇ ಬೇಡವಾಗಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಬಂದಿರುವ ಶಾಖಾ ವ್ಯವಸ್ಥಾಪಕರಿಗೆ ಕನಿಷ್ಠ ನಮ್ಮ ನಾಡಿನ ಭಾಷೆಯಾದ ಕನ್ನಡದ ಅರಿವೂ ಇಲ್ಲ. ಇವರ ಬಳಿ ಕಷ್ಟ ಹೇಳಿಕೊಂಡರೆ, ಭಾಷೆಯ ನೆಪವೊಡ್ಡಿ ಮೂಗು ಮುರಿಯುತ್ತಾರೆ. ಬೆಳೆ ವಿಮೆ ಹಾಗೂ ಸಾಲದ ದಾಖಲೆಗಳ ಕೆಲಸಕ್ಕೆ ನಮ್ಮ ರೈತರು ಬ್ಯಾಂಕ್‌ಗೆ ಬಂದರೆ, “ಸೈಬರ್ ಸೆಂಟರ್‌ಗೆ ಹೋಗಿ ಮಾಡಿಸಿಕೊಳ್ಳಿ” ಎಂದು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿ ರೈತರನ್ನು ಹೊರಗಟ್ಟುತ್ತಾರೆ. ಬೆವರು ಸುರಿಸಿ ದುಡಿಯುವ ಅನ್ನದಾತನ ಗೋಳು ಈ ಅಧಿಕಾರಿಗಳಿಗೆ ಕೇಳಿಸುತ್ತಿಲ್ಲವೇ? ತಮ್ಮ ಹಕ್ಕಿಗಾಗಿ ಬ್ಯಾಂಕ್ ಮೆಟ್ಟಿಲೇರುವ ರೈತರು, ಇಲ್ಲಿನ ಭಾಷಾ ತಾರತಮ್ಯದಿಂದ ನಿರಂತರವಾಗಿ ಅವಮಾನಿತರಾಗಿ ಕಣ್ಣೀರು ಹಾಕುತ್ತಾ ಮರಳುತ್ತಿದ್ದಾರೆ.
ಕನ್ನಡ ಸಂಘಟನೆಗಳು ಕೇವಲ ನವೆಂಬರ್ ತಿಂಗಳಿನಲ್ಲಿ ಮಾತ್ರ ರಾಜ್ಯೋತ್ಸವ ಆಚರಿಸಲು, ಹಳದಿ ಕೆಂಪು ಬಾವುಟ ಹಾರಿಸಲು ಸೀಮಿತವಾದರೆ ಇಂತಹ ದುಸ್ಥಿತಿ ಖಂಡಿತ ಎದುರಾಗುತ್ತದೆ. ರಾಜಧಾನಿ ಬೆಂಗಳೂರಿಗರಿಗೆ ಮಾತ್ರ ಸೀಮಿತವಾಗಿದ್ದ ಹಿಂದಿ ಭಾಷಾ ದಬ್ಬಾಳಿಕೆ ಇದೀಗ ನಮ್ಮ ಗ್ರಾಮೀಣ ಭಾಗಗಳಿಗೂ, ರೈತರ ಮನೆ ಬಾಗಿಲಿಗೂ ಆವರಿಸುತ್ತಿದೆ ಅನ್ನೋದು ಸಂಘಟಕರಿಗೆ, ಹೋರಾಟಗಾರರಿಗೆ ಹಾಗೂ ಸ್ಥಳೀಯ ಕನ್ನಡಿಗರಿಗೆ ನೆನಪಿರಲಿ. ಭಾಷಾಭಿಮಾನ ಕೇವಲ ಭಾಷಣಕ್ಕೆ ಸೀಮಿತವಾಗಬಾರದು, ಇಂತಹ ಅನ್ಯಾಯದ ವಿರುದ್ಧ ಪ್ರತಿಯೊಬ್ಬ ಕನ್ನಡಿಗನೂ ಸಿಡಿದೇಳಬೇಕಾದ ತುರ್ತು ಅಗತ್ಯವಿದೆ.
ಕೂಡಲೇ ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳು ಈ ಗಂಭೀರ ವಿಚಾರದ ಬಗ್ಗೆ ಎಚ್ಚೆತ್ತುಕೊಳ್ಳಬೇಕು! ಕನ್ನಡ ಮಣ್ಣಿನಲ್ಲಿ, ಕನ್ನಡವೇ ಬಾರದ ಹಾಗೂ ಅನ್ನ ಹಾಕುವ ರೈತರ ಬಗ್ಗೆ ಕಿಂಚಿತ್ತೂ ಸಂವೇದನೆಯೇ ಇಲ್ಲದ ಈ ದರ್ಪದ ಅಧಿಕಾರಿಗಳನ್ನು ತಕ್ಷಣವೇ ಇಲ್ಲಿಂದ ವರ್ಗಾವಣೆ ಮಾಡಲೇಬೇಕು. ನಮ್ಮ ರೈತರ ಸಮಸ್ಯೆಗೆ ತ್ವರಿತವಾಗಿ ನ್ಯಾಯ ಒದಗಿಸಬೇಕು, ಇಲ್ಲವಾದಲ್ಲಿ ಆಗುವ ಅನಾಹುತಗಳಿಗೆ ಬ್ಯಾಂಕ್ ಆಡಳಿತ ಮಂಡಳಿಯೇ ನೇರ ಹೊಣೆಯಾಗುತ್ತದೆ.
ಮೇಲಧಿಕಾರಿಗಳು ಸ್ಪಂದಿಸದಿದ್ದರೆ, ಮುಂಬರುವ ದಿನಗಳಲ್ಲಿ ಬ್ಯಾಂಕ್ ಆವರಣದಲ್ಲೇ ರೈತರು, ಕಾರ್ಮಿಕರು ಹಾಗೂ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬ್ಯಾಂಕ್‌ಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಬೇಕಾದೀತು ಎಚ್ಚರಿಕೆ…




