Headlines

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಜುಲೈ 1ರಂದು ಉಚಿತ ತರಬೇತಿ: ಕಾಯಕಸೇತು ವತಿಯಿಂದ 30 ದಿನಗಳ ಉಚಿತ ಆನ್‌ಲೈನ್ ಕೋಚಿಂಗ್

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಜುಲೈ 1ರಂದು ಉಚಿತ ತರಬೇತಿ: ಕಾಯಕಸೇತು ವತಿಯಿಂದ 30 ದಿನಗಳ ಉಚಿತ ಆನ್‌ಲೈನ್ ಕೋಚಿಂಗ್

Free police recruitment training and guidance workshop to be held in Shivamogga on July 1 by Sarji Foundation and JCI Shivamogga Malnad. Candidates will also get access to a 30-day free online coaching program through Kayakasethu.

ಶಿವಮೊಗ್ಗ, ಜೂನ್ 25: ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಿಗೆ ಸೇರುವ ಕನಸು ಹೊಂದಿರುವ ಯುವಕರಿಗೆ ಸುವರ್ಣಾವಕಾಶ ಒದಗಿಸುವ ಉದ್ದೇಶದಿಂದ ನಗರದ ಸರ್ಜಿ ಫೌಂಡೇಶನ್ ಹಾಗೂ ಜೆಸಿಐ ಶಿವಮೊಗ್ಗ ಮಲ್ನಾಡ್ ವತಿಯಿಂದ ಜುಲೈ 1ರಂದು ಉಚಿತ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಶಾಸಕ ಡಾ. ಧನಂಜಯ ಸರ್ಜಿ, ಜಿಲ್ಲೆಯ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗಾಗಿ ಜುಲೈ 1ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಒಂದು ದಿನದ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತಜ್ಞರಾದ ಸೋಮಪ್ಪ ಡುಂಡಿಗೆರೆ ಹಾಗೂ ನಾಗರಾಜ್ ರೆಡ್ಡಿ ಭಾಗವಹಿಸಿ, ಇತ್ತೀಚಿನ ಪರೀಕ್ಷಾ ಮಾದರಿ, ಪ್ರಶ್ನೆಪತ್ರಿಕೆ ವಿಶ್ಲೇಷಣೆ, ದೈಹಿಕ ಪರೀಕ್ಷೆಯ ವಿಧಾನಗಳು, ಪಠ್ಯಕ್ರಮ, ಪರೀಕ್ಷೆ ಎದುರಿಸುವ ತಂತ್ರಗಳು ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿನ ಇತ್ತೀಚಿನ ಬದಲಾವಣೆಗಳ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ.

30 ದಿನಗಳ ಉಚಿತ ಆನ್‌ಲೈನ್ ತರಬೇತಿ

ಕಾರ್ಯಾಗಾರದ ಬಳಿಕ “ಕಾಯಕಸೇತು ಪರೀಕ್ಷಾಪಥ” ಹೆಸರಿನ 30 ದಿನಗಳ ಉಚಿತ ಆನ್‌ಲೈನ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಜೂನ್ 29ರಿಂದ ಆರಂಭವಾಗಲಿರುವ ಈ ತರಬೇತಿಯಲ್ಲಿ ಪ್ರತಿದಿನ ಬೆಳಿಗ್ಗೆ 2 ಗಂಟೆ ಹಾಗೂ ಸಂಜೆ 2 ಗಂಟೆಗಳ ಕಾಲ ಅನುಭವಿ ಉಪನ್ಯಾಸಕರಿಂದ ಪಾಠ ಮಾಡಲಾಗುತ್ತದೆ.

ಅಭ್ಯರ್ಥಿಗಳ ಪ್ರಗತಿ ಪರಿಶೀಲನೆ ಹಾಗೂ ಸಮಯ ನಿರ್ವಹಣಾ ಕೌಶಲ್ಯ ವೃದ್ಧಿಗಾಗಿ ಪ್ರತಿದಿನ ಹಾಗೂ ವಾರಕ್ಕೊಮ್ಮೆ ಟೆಸ್ಟ್ ಸೀರೀಸ್‌ಗಳನ್ನು ನಡೆಸಲಾಗುವುದು. ಜೊತೆಗೆ, ಭಾಗವಹಿಸುವವರಿಗೆ ಡಿಜಿಟಲ್ ರೂಪದಲ್ಲಿ ಸಮಗ್ರ ಸ್ಟಡಿ ಮೆಟೀರಿಯಲ್‌ಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ.

ಗ್ರಾಮೀಣ ಅಭ್ಯರ್ಥಿಗಳಿಗೆ ನೆರವು

ಗ್ರಾಮೀಣ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ದುಬಾರಿ ತರಬೇತಿ ಕೇಂದ್ರಗಳ ವೆಚ್ಚವನ್ನು ತಪ್ಪಿಸಿ, ಗುಣಮಟ್ಟದ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. 30 ದಿನಗಳ ಉಚಿತ ಆನ್‌ಲೈನ್ ತರಬೇತಿಗೆ ಕೇವಲ 1,000 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ತರಬೇತಿಯಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಕಾಯಕಸೇತು ಜಾಬ್ ಪೋರ್ಟಲ್ ಮೂಲಕ ಕಡ್ಡಾಯವಾಗಿ ಆನ್‌ಲೈನ್ ನೋಂದಣಿ ಮಾಡಿಕೊಳ್ಳಬೇಕು. ನೋಂದಾಯಿತ ಅರ್ಹ ಪದವೀಧರ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಇದೇ ವೇಳೆ, ಜೂನ್ 8ರಿಂದ 13ರವರೆಗೆ ನಡೆದ ಕಾಯಕಸೇತು ಉದ್ಯೋಗ ಸಂದರ್ಶನ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದು, ಅವರಲ್ಲಿ 404 ಮಂದಿ ಆಯ್ಕೆಯಾಗಿ ನೇಮಕಾತಿ ಪತ್ರ ಪಡೆದಿದ್ದಾರೆ. ಕಳೆದ ಎಂಟು ತಿಂಗಳಲ್ಲಿ ಕಾಯಕಸೇತು ಜಾಬ್ ಪೋರ್ಟಲ್ ಮೂಲಕ 544 ಯುವಕರಿಗೆ ಉದ್ಯೋಗ ದೊರೆತಿದೆ ಎಂದು ಮಾಹಿತಿ ನೀಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಜೆಸಿಐ ಶಿವಮೊಗ್ಗ ಮಲ್ನಾಡ್ ಅಧ್ಯಕ್ಷ ಘನಶ್ಯಾಮ್ ಜಿ. ಗಿರಿಮಾಜಿ, ಕಾರ್ಯಕ್ರಮ ಕಾರ್ಯಾಧ್ಯಕ್ಷ ವಿಕಾಸ್ ಹೆಗ್ಡೆ ಹಾಗೂ ಪೂರ್ವ ವಲಯ ಅಧಿಕಾರಿ ಜೆ.ಸಿ. ಕಿರಣ್ ಕುಮಾರ್ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ: 7812926702 ಸಂಪರ್ಕಿಸಬಹುದು.

About The Author

Exit mobile version