ಆಗುಂಬೆ ಬಳಿ ಭೀಕರ ರಸ್ತೆ ಅಪಘಾತ: ಕಾರು ಡಿಕ್ಕಿಗೆ ಗಾಯಗೊಂಡ ಕೂಲಿ ಕಾರ್ಮಿಕ ಆಸ್ಪತ್ರೆ ಮಾರ್ಗಮಧ್ಯೆ ಸಾವು
A 62-year-old labourer from Talluru village near Agumbe died on the way to hospital after being hit by a car while crossing the Shivamogga-Udupi National Highway. Agumbe Police have registered a case.
ತೀರ್ಥಹಳ್ಳಿ, ಜೂನ್ 22: ತಾಲೂಕಿನ ಆಗುಂಬೆ ಸಮೀಪದ ತಲ್ಲೂರು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಕೂಲಿ ಕಾರ್ಮಿಕರೊಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿರುವ ದುರ್ಘಟನೆ ನಡೆದಿದೆ
ಮೃತರನ್ನು ಆಗುಂಬೆಯ ತಲ್ಲೂರು ಗ್ರಾಮದ ಕೊಪ್ಪ ರಸ್ತೆ ನಿವಾಸಿ ಸಂಜಯ್ ಜಿ.ಪಿ. (62) ಎಂದು ಗುರುತಿಸಲಾಗಿದೆ. ಇವರು ಹಿಂದೆ ಬಸ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಕೂಲಿ ಕೆಲಸ ಮಾಡುತ್ತಿದ್ದರು.
ಭಾನುವಾರ ಬೆಳಗ್ಗೆ ಸಂಜಯ್ ಅವರು ತಮ್ಮ ಅಣ್ಣ ರಾಮನಾಥ್ ಅವರೊಂದಿಗೆ ವಾಕಿಂಗ್ ಮುಗಿಸಿಕೊಂಡು ಮನೆಗೆ ಹಿಂದಿರುಗುವ ವೇಳೆ ತಲ್ಲೂರು ಗ್ರಾಮದ ಮಹೇಶ್ ಅವರ ಹೋಟೆಲ್‌ಗೆ ಟೀ ಕುಡಿಯಲು ತೆರಳಿದ್ದರು. ಬಳಿಕ ಮನೆಗೆ ತೆರಳಲು ಶಿವಮೊಗ್ಗ-ಉಡುಪಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಆಗುಂಬೆ ಬಸ್ ನಿಲ್ದಾಣದ ಕಡೆಯಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸಂಜಯ್ ಅವರು ರಸ್ತೆಗೆ ಎಸೆಯಲ್ಪಟ್ಟು ಬಿದ್ದಿದ್ದು, ತಲೆ, ಸೊಂಟ ಹಾಗೂ ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಹೆಬ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಚಿಕಿತ್ಸೆಗಾಗಿ ಸಾಗಿಸುವ ಮಾರ್ಗಮಧ್ಯೆಯೇ ಸಂಜಯ್ ಅವರು ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




