ಅಕ್ರಮ ನಾಡ ಬಂದೂಕು ತಯಾರಿಸುತಿದ್ದ ವ್ಯಕ್ತಿಯ ಬಂಧನ, ಬಂದೂಕು ವಶಕ್ಕೆ
A 56-year-old man was arrested in Akklapura village of Thirthahalli taluk for allegedly manufacturing an illegal country-made gun. Police seized the weapon and registered a case under relevant sections of the Arms Act.
ತೀರ್ಥಹಳ್ಳಿ, ಜೂನ್ 21: ಅಕ್ರಮವಾಗಿ ನಾಡ ಬಂದೂಕು (Country-made Gun) ತಯಾರಿಸುತ್ತಿದ್ದ ಆರೋಪದ ಮೇರೆಗೆ ತೀರ್ಥಹಳ್ಳಿ ತಾಲೂಕಿನ ಅಕ್ಲಾಪುರ ಗ್ರಾಮದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸುಧಾಕರ ಆಚಾರಿ (56) ಎಂದು ಗುರುತಿಸಲಾಗಿದ್ದು, ಆರೋಪಿಯಿಂದ ಒಂದು ನಾಡ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಇಲಾಖೆ ಶನಿವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ಲಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದೂಕು ತಯಾರಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಆಧಾರದ ಮೇಲೆ ತೀರ್ಥಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ದಾಳಿ ವೇಳೆ ಆರೋಪಿಯನ್ನು ಬಂಧಿಸಿ, ಅಕ್ರಮವಾಗಿ ತಯಾರಿಸಲಾಗಿದ್ದ ಶಸ್ತ್ರಾಸ್ತ್ರವನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆಯುಧ ಕಾಯ್ದೆಯ (Arms Act) ಕಲಂ 3, 5 ಮತ್ತು 25ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಡಿವೈಎಸ್ಪಿ ಅರವಿಂದ ಕಲಗುಜ್ಜಿ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್ ಇಮ್ರಾನ್ ಬೇಗ್ ಅವರ ಮಾರ್ಗದರ್ಶನದಲ್ಲಿ, ಸಬ್ ಇನ್ಸ್‌ಪೆಕ್ಟರ್ ಆರ್. ಸುಷ್ಮಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಸಿಬ್ಬಂದಿಗಳಾದ ಲಿಂಗೇಗೌಡ, ಪ್ರವೀಣ್ ಕುಮಾರ್, ಪರಮೇಶ್ ನಾಯ್ಕ್, ದೀಪಕ್, ದೀಪಕ್ ಕೆ.ಪಿ., ಪ್ರಮೋದ್ ಜಿ., ರಾಘವೇಂದ್ರ ಹಾಗೂ ಮೋಹನ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




